ಸಾರಾಂಶ
ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಮತ್ತು ಪಶುರೋಗ ತಪಾಸಣಾ ಮತ್ತು ಮಾಹಿತಿ ಕೇಂದ್ರದ ಕಟ್ಟಡ ಉದ್ಘಾಟನೆ ಹಾಗೂ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ನಡೆಯಿತು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಉದ್ಘಾಟನೆ, ಮೈತ್ರಿ ಕಾರ್ಯಕರ್ತರಿಗೆ ತರಬೇತಿ
ಕನ್ನಡಪ್ರಭ ವಾರ್ತೆ ಮಂಗಳೂರುಪಶು ಸಖಿಯರ ಗೌರವಧನ ಅತ್ಯಂತ ಕಡಿಮೆ ಇದ್ದು, ಕನಿಷ್ಠ 5 ಸಾವಿರ ರು.ಗಳನ್ನಾದರೂ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೂ ಮನವಿ ಸಲ್ಲಿಸುವುದಾಗಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಮತ್ತು ಪಶುರೋಗ ತಪಾಸಣಾ ಮತ್ತು ಮಾಹಿತಿ ಕೇಂದ್ರದ ಕಟ್ಟಡ ಉದ್ಘಾಟನೆ ಹಾಗೂ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರ ಪಶು ಸಖಿಯರನ್ನು ನೇಮಕ ಮಾಡಿದ್ದು, ಅತಿ ಕಡಿಮೆ ಗೌರವಧನ ನೀಡಲಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಅವರ ಸೇವೆ ದೊಡ್ಡದಿದೆ. ಹಾಗಾಗಿ ಕನಿಷ್ಠ 5 ಸಾವಿರ ರು.ಗೆ ಗೌರವಧನ ಏರಿಕೆ ಮಾಡುವಂತೆ ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಜತೆಗೆ ರಾಜ್ಯ ಸರ್ಕಾರದಿಂದ ನೆರವು ನೀಡಲು ಮುಖ್ಯಮಂತ್ರಿ ಬಳಿಯೂ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದ.ಕ. ಹಾಲು ಒಕ್ಕೂಟಕ್ಕೆ ಹೆಚ್ಚಿನ ಲಾಭ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಪ್ರತಿದಿನ 3.40 ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದ್ದರೆ, 1.60 ಲಕ್ಷ ಲೀ. ಹೆಚ್ಚುವರಿ ಹಾಲನ್ನು ಹೊರ ಜಿಲ್ಲೆಗಳಿಂದ ಖರೀದಿ ಮಾಡುವ ಮೂಲಕ ಇತರ ಒಕ್ಕೂಟಗಳಿಗಿಂತ ಲಾಭದಾಯಕವಾಗಿದೆ. ಆದರೆ ಮಂಡ್ಯ, ಮೈಸೂರು ಒಕ್ಕೂಟಗಳ ಹಾಲು ಉತ್ಪಾದನೆಯ ಶೇ.40ರಷ್ಟು ಮಾತ್ರ ಖರ್ಚಾಗುತ್ತಿದ್ದು, ನಷ್ಟದಲ್ಲಿವೆ ಎಂದರು.ಇದೇ ಸಂದರ್ಭ ಪಶು ಸಖಿಯರಿಗೆ ಪ್ರಮಾಣ ಪತ್ರ ವಿತರಣೆ, ಮೈತ್ರಿ ಯೋಜನೆಯ ಕೃತಕ ಗರ್ಭಧಾರಣೆಯ ಜಾಡಿಗಳನ್ನು ವಿತರಿಸಲಾಯಿತು.
ಜಿ.ಪಂ. ಸಿಇಒ ಡಾ.ಆನಂದ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ.ಮಂಜುನಾಥ ಎಸ್ ಪಾಳೇಗಾರ್, ಜಂಟಿ ನಿರ್ದೇಶಕರಾದ ಡಾ.ಶಿವಣ್ಣ, ಡಾ.ಚಂದ್ರ ನಾಯ್ಕ್, ಕೊೖಲ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್, ಇಂಡಿಯನ್ ವೆಟರ್ನರಿ ಕೌನ್ಸಿಲ್ ಸದಸ್ಯ ಡಾ.ಸುಶಾಂತ್ ರೈ, ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ತಮ್ಮಯ್ಯ ಎ.ಬಿ ಮೊದಲಾದವರು ಇದ್ದರು. ದ.ಕ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.---------------ವಿರೋಧ ಪಕ್ಷಗಳಿಗೆ ರೈತರ ಚಿಂತೆ ಇಲ್ಲ
ಹಾಲಿನ ದರ ಹೆಚ್ಚಳದ ಕುರಿತು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ ಗೊಂದಲ ಸೃಷ್ಟಿಸುತ್ತಿವೆ. ಆದರೆ ಹಾಲಿಗೆ ಹೆಚ್ಚಳ ಮಾಡಿರುವ 4 ರು. ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿದೆ. ಒಕ್ಕೂಟವಾಗಿರಲಿ ಅಥವಾ ಸರ್ಕಾರಕ್ಕೂ ಈ ಮೊತ್ತ ಹೋಗುತ್ತಿಲ್ಲ. ರೈತರಿಗೆ ಸಹಾಯ ಮಾಡುವ ಕಾರಣದಿಂದಲೇ ದರ ಹೆಚ್ಚಿಸಿರೋದು. ಪ್ರತಿಭಟನೆ ಮಾಡುವ ವಿರೋಧ ಪಕ್ಷಗಳಿಗೆ ರೈತರ ಚಿಂತೆಯೇ ಇಲ್ಲ ಎಂದು ಸಚಿವ ವೆಂಕಟೇಶ್ ಟೀಕಿಸಿದರು.