ಸಾರಾಂಶ
ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನ ಪಡೆಯಬೇಕು ಎಂದು ಮಂದೋಡಿ ಜಗನ್ನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನ ಪಡೆಯಬೇಕು. ಸಮೀಪದ ಶಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಸದುಪಯೋಗ ಪಡಿಸಿ ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಕರೆ ನೀಡಿದ್ದಾರೆ. ಅವರು ಇತ್ತೀಚೆಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ವತಿಯಿಂದ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಸಹಯೋಗದಲ್ಲಿ ಜನ ಸುರಕ್ಷಾ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ನಾಕೂರು ಶಿರಂಗಾಲ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಆಯಾ ಗ್ರಾಮದ ಬ್ಶಾಂಕ್ ಶಾಖೆ ಮುಖಾಂತರ ಪ್ರತೀವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಸುಂಟಿಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಅನಿಕೇತ್ ಅವರು, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭಿಮಾ ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ ರು. 20 ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ರು..2 ಲಕ್ಷ ಗಳ ವರೆಗಿನ ವಿಮಾಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು. ಹಾಗೂ ವಾರ್ಷಿಕವಾಗಿ 436 ರು. ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣಹೊಂದಿದರೆ ಅಂತವರ ನಾಮಿನಿಗೂ ಕೂಡ 2 ಲಕ್ಷ ಗಳ ವಿಮಾಮೊತ್ತ ಸಿಗಲಿದೆ.ಈ ಎರಡನ್ನೂ ಮಾಡಿಸಿಕೊಂಡಲ್ಲಿ 4 ಲಕ್ಷ ರು. ಗಳ ವರೆಗಿನ ವಿಮಾಮೊತ್ತ ಸಿಗುವುದಲ್ಲದೆ 60ವಯಸ್ಸು ಆದ ನಂತರದಲ್ಲಿ ಪಿಂಚಣಿರೂಪದಲ್ಲಿ ರು. 1000 ಗಳಿಂದ ರೂ. 5000 ಗಳ ವರೆಗಿನ ಪಿಂಚಣಿ ಹಣಸಿಗಬೇಕಾದರೆ ಕೂಡಲೇ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸುವಂತೆ ತಿಳಿಸಿದರು.ನಂತರ ಆರ್ಥಿಕ ಸಮಾಲೋಚಕರಾದ ನಬಿ ಅವರು ಮಾತನಾಡಿ, ಪ್ರತಿಯೊಬ್ಬರು ಮರು ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ಎಲ್ಲರೂ ನಿಮ್ಮ ಖಾತೆ ಇರುವ ಬ್ಯಾಂಕ್ ಗಳಿಗೆ ತೆರಳಿ ತಮ್ಮ ಗುರುತಿನ ಚೀಟಿ ಆಧಾರ್ ಕಾರ್ಡನ್ನು ನೀಡಿ ಮರು ಕೆವೈಸಿ ಮಾಡಿಸುವಂತೆ ಗ್ರಾಹಕರಿಗೆ ಸಲಹೆ ನೀಡಿದರು.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ನಬಾರ್ಡ್ ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು ಇದರ ಮುಖ್ಯ ಉದ್ದೇಶವೂ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪಾವತಿ ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದು ಆರ್ಥಿಕ ಸಮಾಲೋಚಕರಾದ ಸಿ.ಜಿ.ಹರೀಶ್ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ ಕುಮಾರಿ, ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಸೆಲ್ವ ಕುಮಾರ್, ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.