ಸಾರಾಂಶ
ಆವರ್ತಿ ರಾಜೇಶ್ವರಿ ವಿದ್ಯಾಸಂಸ್ಥೆಯ 2006-2007 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಮಡಿಕೇರಿ : ಕುಶಾಲನಗರ ಸಮೀಪದ ಆವರ್ತಿ ರಾಜೇಶ್ವರಿ ವಿದ್ಯಾ ಸಂಸ್ಥೆಯ 2006-07 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ದಶಕಗಳ ನಂತರ ವಿದ್ಯೆ ಕಲಿಸಿದ್ದ ಗುರುಗಳು ಹಾಗೂ ಬಾಲ್ಯದ ಗೆಳೆಯ, ಗೆಳತಿಯರೊಂದಿಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮುಖಾಮುಖಿಯಾದರು. ಬಾಲ್ಯದ ಖುಷಿಯ ಕ್ಷಣಗಳನ್ನು ಸ್ಮರಿಸುವುದಕ್ಕೆ ಹಾಗೂ ಸದ್ಯದ ಬದುಕಿನ ಕುರಿತು ಪರಸ್ಪರ ಕುಶಲೋಪರಿಗೆ ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿತು.ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಹಿರಿಯ ಶಿಕ್ಷಕರಾದ ಗುರುದತ್ ಹಾಗೂ ಭೈರಯ್ಯ , ಸಂಸ್ಥೆಯಲ್ಲಿ ವಿದ್ಯೆ ಕಲಿತು ಇಂದು ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ವಿದ್ಯೆ ಕಲಿತ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟಿರುವುದು ಮೆಚ್ಚ ತಕ್ಕದ್ದು ಎಂದರು.ಇದೆ ವೇಳೆ ವಿದ್ಯೆ ಕಲಿಸಿದ ಗುರುಗಳಿಗೆ ಹಳೆ ವಿದ್ಯಾರ್ಥಿ ಸಂಘದಿಂದ ಗುರುನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಪ್ರಮುಖರಾದ ದಾಕ್ಷಾಯಿಣಿ ವಾಸುದೇವ, ಶಾಲೆಯ ಮುಖ್ಯ ಶಿಕ್ಷಕ ಅಪ್ಪಾಜಪ್ಪ, ಕಾಲೇಜಿನ ಪ್ರಾಂಶುಪಾಲರಾದ ಸುಂದರೇಶ್ ಸೇರಿದಂತೆ ಶಾಲೆಯಲ್ಲಿನ ಶಿಕ್ಷಕ ವೃಂದ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂಜುಂಡ ಶೆಟ್ಟಿ, ಕಾರ್ಯದರ್ಶಿ ಶಿವ ಶಂಕರ, ಆಶಾರಾಣಿ ಸೇರಿದಂತೆ ಸಹಪಾಠಿಗಳು ಪಾಲ್ಗೊಂಡಿದ್ದರು.
ಹಳೆ ವಿದ್ಯಾರ್ಥಿ ಭಾಗ್ಯ ಸ್ವಾಗತಿಸಿದರೆ, ಬಿಂದು ನಿರೂಪಿಸಿ ವಂದಿಸಿದರು.ಹಳೆ ವಿದ್ಯಾರ್ಥಿ ಸಂಘದಿಂದ ಸಂಸ್ಥೆಗೆ ಸ್ಮಾರ್ಟ್ ಕ್ಲಾಸ್ ಗೆ ಉಪಯುಕ್ತವಾಗುವಂತಹ ಪ್ರಾಜೆಕ್ಟರ್ ಅನ್ನು ಉಡುಗೊರೆಯಾಗಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಪಾಠಿಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು