ಸಾಹಿತ್ಯ, ಕಲೆಗೆ ಉತ್ತರ ಕನ್ನಡ ಕೊಡುಗೆ ಅಪಾರ: ಹರಿಪ್ರಕಾಶ ಕೋಣೆಮನೆ

| Published : Nov 11 2024, 01:15 AM IST

ಸಾರಾಂಶ

ಭಾರತದ ಸಂಸ್ಕೃತಿ, ಪ್ರಕೃತಿ, ಅಧ್ಯಾತ್ಮದ ಮೂಲಕ ಇಡೀ ಜಗತ್ತಿಗೇ ಕೊಡುಗೆ ನೀಡುತ್ತಿರುವ ಮಹಾನ್ ದೇಶ ಎಂಬುದನ್ನು ನಮ್ಮ ದೇಶ ಸಾರುತ್ತಿದೆ.

ಯಲ್ಲಾಪುರ: ಜಿಲ್ಲೆಯು ಸಾಹಿತ್ಯ, ಕಲೆಗೆ ಅಗಾಧವಾದ ಕೊಡುಗೆ ನೀಡಿದೆ. ಅಂತೆಯೇ ಸಂಕಲ್ಪ ಕೂಡಾ ಅದನ್ನು ಪೋಷಿಸಿಕೊಂಡು ಬಂದಿದೆ. ಭಾರತೀಯ ಶಾಸ್ತ್ರೀಯ ಕಲೆಗಳನ್ನು ಮುಂದಿನ ಜನಾಂಗಕ್ಕೆ ನೀಡುವ ದಾರಿಯನ್ನು ಹಿರಿಯರು ತೋರಿಸಿದಂತೆ ಮುಂದುವರಿಸಿಕೊಂಡು ಹೋಗಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು.

ನ. ೯ರಂದು ವೆಂಕಟರಮಣ ಮಠದ ಸಭಾಂಗಣದಲ್ಲಿ ನಾಟ್ಯಾಂಜಲಿ ನೃತ್ಯಕಲಾ ಕೇಂದ್ರದ ಶಿಕ್ಷಕಿ, ವಿದುಷಿ ವಿನುತಾ ಹೆಗಡೆಯವರ ರಂಗ ರಜತಂ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಯಶಸ್ವೀ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆನ್ನುವ ವಾಕ್ಯ ಸತ್ಯ. ಆದರೆ, ಇಲ್ಲಿ ಯಶಸ್ವೀ ಸ್ತ್ರೀಯರ ಹಿಂದೆ ಪುರುಷರಿರುವುದು ನಮಗೆ ಸಹನಾ ಭಟ್ಟ ಮತ್ತು ವಿನುತಾ ಹೆಗಡೆಯವರ ಕಾರ್ಯದಿಂದ ಕಾಣಬಹುದು. ಅಲ್ಲದೇ ದೂರದ ಮಂಗಳೂರಿನ ಸುಮಂಗಲಾ ರತ್ನಾಕರ ವಿಶಿಷ್ಟ ಕಲಾರಾಧಕರಾಗಿ ವಿಶೇಷ ಸಾಧನೆಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡು ಮುನ್ನಡೆದು ಆದರ್ಶಪ್ರಾಯರಾಗಿದ್ದಾರೆ ಎಂದರು.ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಭಾರತದ ಸಂಸ್ಕೃತಿ, ಪ್ರಕೃತಿ, ಅಧ್ಯಾತ್ಮದ ಮೂಲಕ ಇಡೀ ಜಗತ್ತಿಗೇ ಕೊಡುಗೆ ನೀಡುತ್ತಿರುವ ಮಹಾನ್ ದೇಶ ಎಂಬುದನ್ನು ನಮ್ಮ ದೇಶ ಸಾರುತ್ತಿದೆ. ನಮ್ಮ ಸಂಸ್ಕೃತಿಯ ಶಕ್ತಿಯಾದ ಭರತನಾಟ್ಯ, ಯಕ್ಷಗಾನ, ಸಂಗೀತ ಇವೆಲ್ಲವೂ ನಮ್ಮನ್ನು ಸಂಸ್ಕಾರವಂತರನ್ನಾಗಿಸುತ್ತದೆ ಎಂದರು.ಕಲಾವಿದೆ ಸುಮಂಗಲಾ ರತ್ನಾಕರರಾವ್ ಮಾತನಾಡಿ, ಸಮಾಜದಲ್ಲಿ ಒಬ್ಬ ಕಲಾವಿದನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಹನೆ ಕಡಿಮೆಯಾಗಿದೆ. ಯಾರಿಗೆ ಬೇರೆಯವರ ಕಲೆಯನ್ನು ಆಸ್ವಾದಿಸುವ ಸಹನೆ ಇರುತ್ತದೋ ಆ ವ್ಯಕ್ತಿ ಶ್ರೇಷ್ಠತೆಯನ್ನು ಗಳಿಸುತ್ತಾನೆ ಎಂದರು.ಗುರು ಸಹನಾ ಪ್ರದೀಪ ಭಟ್ಟ ತಮ್ಮ ಅನುಭವದ ಚಿಂತನೆಗಳನ್ನು ಹಂಚಿಕೊಂಡರು. ರಂಗ ರಜತಂ ಕಾರ್ಯಕ್ರಮದ ಸಂಘಟಕಿ ವಿನುತಾ ಹೆಗಡೆ ಮಾತನಾಡಿದರು. ನಾಟ್ಯಾಂಜಲಿ ನೃತ್ಯಕಲಾಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾವಿದ ಸತೀಶ ಯಲ್ಲಾಪುರ, ಸುಜ್ಞಾನ ಫೌಂಡೇಶನ್ನಿನ ಜಿ.ಎನ್. ಭಟ್ಟ, ಪತ್ರಕರ್ತ ನರಸಿಂಹ ಸಾತೊಡ್ಡಿ ಶುಭ ಹಾರೈಸಿದರು. ಸಂಘಟಕ ರಾಘವೇಂದ್ರ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ ಮೂರೂರು ನಿರ್ವಹಿಸಿ, ವಂದಿಸಿದರು.