ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿಶ್ವದಿಂದ ಪೋಲಿಯೊ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಲಸಿಕೆ ನೀಡುವುದನ್ನು ಮುಂದುವರಿಸಲಾಗುವುದು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.

ಭಾನುವಾರ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಚಾಲನಾ ಸಮಾರಂಭದಲ್ಲಿ ಮಾತನಾಡಿ ಮಗು ಜನಿಸಿದ ಸಂದರ್ಭದಲ್ಲಿ ಪೋಲಿಯೊ ಲಸಿಕೆ ನೀಡಿದ್ದರೂ ಸಹ ಸಾರ್ವತ್ರಿಕವಾಗಿ ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆ ಹಾಕಲಾಗುತ್ತದೆ.

ಪೋಲಿಯೊ ನಿರ್ಮೂಲನೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ. ಗುಡ್ಡಗಾಡು ಪ್ರದೇಶ, ವಾಹನಗಳು ಹೋಗದ ಕುಗ್ರಾಮಗಳಲ್ಲಿನ ಯಾವುದೇ ಒಂದು ಮಗುವನ್ನು ಬಿಡದೆ ಲಸಿಕೆ ನೀಡಿರುವುದರಿಂದ ಪೋಲಿಯೊ ನಿರ್ಮೂಲನೆಯಾಗಿದೆ. ತಾಲೂಕಿನಲ್ಲಿ 98 ಪೋಲಿಯೋ ಬೂತ್ ತೆರೆಯಲಾಗಿದೆ. 392 ವ್ಯಾಕ್ಸಿನೇಟರ್ ಗಳು ಕಾರ್ಯನಿರ್ವಹಿಸಲಿದ್ದಾರೆ. 5 ವರ್ಷದೊಳಗಿನ 3917 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. 18,943 ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 28 ವಲಸೆ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.


ರೋಟರಿ ಸಂಸ್ಥೆ ಅಧ್ಯಕ್ಷ ವಿನಯ್ ಕಣಿವೆ ಮಾತನಾಡಿ, ಪೋಲಿಯೊ ನಿರ್ಮೂಲನೆ ರೋಟರಿ ಸಂಸ್ಥೆ ಮಹತ್ವಾಕಾಂಕ್ಷಿ ಯೋಜನೆ. ರೋಟರಿಗೆ ಪ್ರಪಂಚದಲ್ಲಿ ಉತ್ತಮ ಹೆಸರು ತಂದುಕೊಟ್ಟಿರುವುದೇ ಪೋಲಿಯೊ ಕಾರ್ಯಕ್ರಮ. ವಿಶ್ವದ ಬಹು ತೇಕ ದೇಶಗಳಲ್ಲಿ ಪೋಲಿಯೊ ನಿರ್ಮೂಲನೆ ಮಾಡಿದ್ದರೂ ಅಫಘಾನಿಸ್ಥಾನ ಮತ್ತು ಪಾಕಿಸ್ಥಾನದ ಕೆಲವು ಪ್ರದೇಶಗಳಲ್ಲಿ ಪೋಲಿಯೊ ಲಸಿಕೆಹಾಕಲು ಬಿಡದ ಕಾರಣ ಪೋಲಿಯೊ ನಿರ್ಮೂಲನೆ ಸಾಧ್ಯವಾಗಿಲ್ಲ. ಸರ್ಕಾರ, ಆರೋಗ್ಯ ಕಾರ್ಯಕರ್ತರ ಸಹಕಾರದಿಂದ ಪೋಲಿಯೊ ನಿರ್ಮೂಲನೆಯಾಗಿದೆ. ಕ್ಷಯರೋಗ ನಿರ್ಮೂಲನೆಗೆ ರೋಟರಿ ಸಂಸ್ಥೆ ಶ್ರಮಿಸಿತ್ತು. ಇನ್ನೂ ಎರಡು ವರ್ಷಗಳಲ್ಲಿ ಈ ಕಾರ್ಯಕ್ರಮ ನಿಲ್ಲಲಿದೆ. ಮುಂದಿನ ದಿನಗಳಲ್ಲಿ ರೋಟರಿಯಿಂದ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ಬರದಂತೆ ತಡೆಗಟ್ಟಲು 13 ರಿಂದ 21 ವರ್ಷದ ವಯೋಮಾನದ ಯುವತಿಯರಿಗೆ ಮುಂಜಾಗೃತ ಕ್ರಮ ವಾಗಿ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

ಸಮಾಜ ಸೇವಕಿ ಜುಬೇದಾ ಮಾತನಾಡಿದರು. ಪಪಂ ಕಂದಾಯ ನಿರೀಕ್ಷಕ ವಿಜಯಕುಮಾರ್, ರೋಟರಿ ನಿಯೋಜಿತ ಕಾರ್ಯದರ್ಶಿ ಮನೋಜ್ ಶೆಟ್ಟಿ, ಹಿರಿಯ ಶುಶ್ರೂಷಕಿ ಡೈಸಿ,ಅಂಗನವಾಡಿ ಕಾರ್ಯಕರ್ತೆ ಶಿವರತ್ನ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.