12ನೇ ಶತಮಾನದ ವಚನ ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಸಮಾಜದ ಕೇಂದ್ರಬಿಂದುವಾಗಿಸಿ, ರೂಪುಗೊಂಡ ಮಹತ್ವದ ಸಾಹಿತ್ಯ ಪರಂಪರೆಯಾಗಿದೆ.

ಮುಳಗುಂದ: ವಚನ ಸಂಪತ್ತನ್ನು ವಚನಕಾರರು ಸಂಗ್ರಹಿಸಿ ಇಡದಿದ್ದರೆ ನಮಗೆ ಸಿಕ್ಕಿರುವ ಅದೃಷ್ಟವನ್ನು ಜೀವನದ ಮಾರ್ಗದಿಂದ ವಂಚಿತರಾಗುತ್ತಿದ್ದೇವು. ಸಮಾಜದಲ್ಲಿ ಆಚರಣೆಯಲ್ಲಿದ್ದ ಅನೇಕ ಮೌಢ್ಯಾಚರಣೆಗಳು ಜೀವಂತಾಗಿರುತ್ತಿದ್ದವು ಎಂದು ಧಾರವಾಡ ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ವೀಣಾ ಬಿರಾದಾರ ತಿಳಿಸಿದರು.ಪಟ್ಟಣದ ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ 167ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅನುಭಾವ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದ ಅವರು, ಬಸವಣ್ಣನವರು ವಚನ ಸಾಹಿತ್ಯದ ಮೂಲಕ ನಾಡಿನಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ಎಂದರು.

12ನೇ ಶತಮಾನದ ವಚನ ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಸಮಾಜದ ಕೇಂದ್ರಬಿಂದುವಾಗಿಸಿ, ರೂಪುಗೊಂಡ ಮಹತ್ವದ ಸಾಹಿತ್ಯ ಪರಂಪರೆಯಾಗಿದೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರ ವಚನಗಳು ಸಮಾನತೆ, ಸಹಾನೂಭೂತಿ, ಶ್ರಮದ ಗೌರವ ಹಾಗೂ ಮಾನವ ಘನತೆಯ ಸಂದೇಶವನ್ನು ಸಾರುತ್ತವೆ. ಸಮಾಜದಲ್ಲಿ ಮೊದಲಿಗೆ ಸ್ತ್ರೀಯರಿಗೆ ಸಮಾನತೆ, ಸ್ಥಾನಮಾನ ನೀಡಿದವರು ವಿಶ್ವಗುರು ಬಸವಣ್ಣನವರು ಎಂದರು.

ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ, ಭಕ್ತಿ, ವೈರಾಗ್ಯ, ಜ್ಞಾನ ಬರುವುದು ಜಾತ್ರೆಯಿಂದ. ಸಾಹಿತ್ಯಲೋಕಕ್ಕೆ ಕೈವಲ್ಯ ದರ್ಪಣ ನೀಡಿದ ಮಠ ಮುಳಗುಂದದ ಗವಿಮಠ. ನಮ್ಮೆಲ್ಲರಿಗೂ ಆದರ್ಶ ಗುರುಗಳು ಬಾಲಲೀಲಾ ಮಹಾಂತ ಶಿವಯೋಗಿಗಳು ಎಂದು ಶಿವಯೋಗಿಗಳ ಲೀಲಾ, ಪವಾಡಗಳ ಕುರಿತು ತಿಳಿಸಿದರು.

ಶಿವಮೊಗ್ಗ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಬಾಲಲೀಲಾ ಮಹಾಂತ ಶಿವಯೋಗಿಗಳು ಕಡು ವೈರಾಗ್ಯ ಮೂರ್ತಿಗಳು. ಇವರ ಪದ್ಯಗಳಲ್ಲಿನ ಪ್ರತಿ ಪದಗಳು ಜೀವನದ ಮೌಲ್ಯಗಳ ಸಾರವಾಗಿದ್ದು. ಇಂತಹ ಶರಣರ ತತ್ವಗಳು ನಮ್ಮೆಲ್ಲರಿಗೂ ಮಾದರಿ, ಜೀವನಕ್ಕೆ ಸಹಕಾರಿಯಾಗಿವೆ ಎಂದರು.

ಈ ವೇಳೆ ಶ್ರೀಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು, ಸೇವಾ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಗೌರಮ್ಮಾ ಬಡ್ನಿ, ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪುರ ಸೇರಿದಂತೆ ಇತರರು ಇದ್ದರು.