ಸಾರಾಂಶ
ಮಹರ್ಷಿ ವಾಲ್ಮೀಕಿ ಜಯಂತಿ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಿಂದ ಹೊರ ನಡೆದ ಮುಖಂಡರು
ಕನ್ನಡಪ್ರಭ ವಾರ್ತೆ ಹೊಸಪೇಟೆರಾಜ್ಯದಲ್ಲಿ ಕುರುಬ ಸಮಾಜವನ್ನೂ ಎಸ್ಟಿಗೆ ಸೇರ್ಪಡೆ ಮಾಡಲು ಸರ್ಕಾರ ಹೊರಟಿದೆ. ಇದನ್ನು ಖಂಡಿಸಿ ಸೆ.25ರಂದು ಹೊಸಪೇಟೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಸಭೆ ಬಹಿಷ್ಕಾರ ಮಾಡಬೇಕೆಂಬ ಆಲೋಚನೆ ಹೊಂದಿದ್ದೇವು, ಆದರೆ, ಜಿಲ್ಲಾಡಳಿತಕ್ಕೆ ಗೌರವಕೊಟ್ಟು ಸಭೆಗೆ ಬಂದಿದ್ದೇವೆ. ಎಸ್ಟಿಗೆ ಬೇರೆ ಜಾತಿಗಳನ್ನು ಸೇರ್ಪಡೆ ಮಾಡುವುದಕ್ಕೆ ನಮ್ಮ ಸಂಪೂರ್ಣ ವಿರೋಧ ಇದೆ. ಹಾಗಾಗಿ ಸಭೆಯಿಂದ ಸಮಾಜದ ಮುಖಂಡರು ಎಲ್ಲರೂ ತೆರಳುತ್ತಿದ್ದೇವೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ವಾಲ್ಮೀಕಿ ಸಮಾಜದ ಪರ ಅಭಿಪ್ರಾಯ ಮಂಡಿಸಿದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್ಟಿ ಕೆಟಗರಿಯಲ್ಲಿ ಕುರುಬ, ಮಡಿವಾಳ, ಗೊಲ್ಲ ಸೇರಿದಂತೆ ವಿವಿಧ ಸಮಾಜಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಶೇ.7ರ ಮೀಸಲಾತಿಯಲ್ಲಿ ಬೇರೆ ಸಮಾಜಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಹಾಗಾಗಿ ಸೆ.25ರಂದು ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಮೀಸಲಾತಿ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಜಿಲ್ಲಾಡಳಿತದಿಂದ ನಡೆಸುವ ಮಹರ್ಷಿ ವಾಲ್ಮೀಕಿ ಜಯಂತಿ ಕುರಿತು ಮುಂದಿನ ದಿನಗಳಲ್ಲಿ ಸಮಾಜದ ನಿರ್ಣಯ ತಿಳಿಸುತ್ತೇವೆ. ನಮ್ಮ ಮೀಸಲಾತಿ ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ವಾಲ್ಮೀಕಿ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ 45 ಲಕ್ಷ ಇದೆ. ಹೀಗಿದ್ದರೂ ಬೇರೆ ಬೇರೆ ಸಮಾಜಗಳನ್ನು ಎಸ್ಟಿಗೆ ಸೇರ್ಪಡೆ ಮಾಡಲಾಗುತ್ತಿದೆ. ಇನ್ನೂ ಎಸ್ಟಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡು ಉದ್ಯೋಗಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಕುರುಬ ಸಮಾಜ ಸೇರಿದಂತೆ ಬೇರೆ ಜಾತಿಗಳನ್ನು ಎಸ್ಟಿ ಕೆಟಗರಿಗೆ ಸೇರ್ಪಡೆ ಮಾಡುವುದನ್ನು ನಾವು ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದರು.
ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮಾಜಗಳಿಗೆ ಅನ್ಯಾಯ ಮಾಡುತ್ತಿದೆ. ಮೀಸಲಾತಿಯನ್ನು ಸಂಪೂರ್ಣವಾಗಿ ಗೌಣಗೊಳಿಸುತ್ತಿದೆ. ಹಾಗಾಗಿ ರಾಜನಹಳ್ಳಿ ಗುರುಪೀಠದ ಶ್ರೀಗಳ ಆಣತಿಯಂತೇ ನಾವು ಸೆ.25ರಂದು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಈಗ ನಾವು ಸಭೆಯಿಂದ ಹೊರ ನಡೆಯುತ್ತಿದ್ದೇವೆ ಎಂದರು. ಬಳಿಕ ಸಮಾಜದ ಮುಖಂಡರು ಸಭೆಯಿಂದ ಹೊರ ನಡೆದರು.ಅ. 7ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ:
ಬಳಿಕ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಅ. 7 ರಂದು ಜಿಲ್ಲಾ ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ಬಳ್ಳಾರಿ ರಸ್ತೆಯಲ್ಲಿರುವ ಶ್ರೀಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ತಿಳಿಸಿದರು.ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸಾಧನೆ, ಸಾಮಾಜಿಕ ಸೇವೆ ಹಾಗೂ ಉನ್ನತ ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆಗೈದವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಕ್ರಮ ವಹಿಸಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ವೈ.ಎ. ಕಾಳೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.