ಸಾರಾಂಶ
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ತಾಲೂಕಿನ ದೋಟಿಹಾಳದ (ನವನಗರ) ಬಳಿಯ ಹಳ್ಳದ ಸೇತುವೆಯು ಸಂಪೂರ್ಣ ಶಿಥಿಲಗೊಂಡು ತಡೆಗೋಡೆ ಕುಸಿದಿದ್ದು, ಸೇತುವೆಯ ಮೇಲೆ ಸಂಚರಿಸುವ ವಾಹನ ಸವಾರರಿಗೆ ಜೀವಭಯ ಹುಟ್ಟಿದೆ.ಈ ಸೇತುವೆ ದೋಟಿಹಾಳದಿಂದ ಮುದೇನೂರು ಮೂಲಕ ತಾವರಗೇರಾ ರಾಯಚೂರು ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿದೆ. ಈ ಸೇತುವೆ ಮೇಲೆ ಹತ್ತಾರು ಗುಂಡಿಗಳು ಬಿದ್ದು ಸಂಚಾರಕ್ಕೆ ತೊಡಕಾಗಿದೆ.
ಉರುಳಿದ ಟಿಪ್ಪರ್: ಶುಕ್ರವಾರ ಬಳೂಟಗಿ ಗ್ರಾಮದಿಂದ ದೋಟಿಹಾಳ ಮಾರ್ಗವಾಗಿ ಕುಷ್ಟಗಿ ಪಟ್ಟಣಕ್ಕೆ ಹೊರಟಿರುವ ಟಿಪ್ಪರ್ ಹಳ್ಳಕ್ಕೆ ಉರುಳಿ ಬಿದ್ದಿದೆ. ಸೇತುವೆ ಮೇಲಿರುವ ಗುಂಡಿಗಳನ್ನು ತಪ್ಪಿಸುವ ಸಲುವಾಗಿ ಚಾಲಕ ಶಿವಪ್ಪ ಮದ್ನಾಳ ಅವರು ಗಾಡಿಯನ್ನು ಎಡಗಡೆ ತಿರುಗಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ರಾತ್ರಿಯ ಹೊತ್ತು ಸೇತುವೆ ಮೇಲೆ ಸಂಚಾರ ಮಾಡುವ ವಾಹನ ಸವಾರರಿಗೆ ಡಬಲ್ ಗುಂಡಿಗೆ ಇರಬೇಕು. ಸೇತುವೆಯ ತಡೆಗೋಡೆ ಕುಸಿದು ಹೋಗಿದೆ. ಕೂಡಲೇ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅನಾಹುತವಾಗುವುದು ನಿಶ್ಚಿತ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು ಆರು ವರ್ಷಗಳ ಹಿಂದೆ ದೋಟಿಹಾಳ ಗ್ರಾಮದಿಂದ ಮುದೇನೂರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೋಟ್ಯಂತರ ರು. ಅನುದಾನದಲ್ಲಿ ಮಾಡಲಾಗಿತ್ತು. ಆಗ ಕುಸಿದಿರುವ ಸೇತುವೆಯನ್ನು ಕಾಟಾಚಾರಕ್ಕೆ ದುರಸ್ತಿಗೊಳಿಸಲಾಗಿತ್ತು.ಹಳೆಯದಾದ ಸೇತುವೆ: ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ಈ ಸೇತುವೆ ಮೂಲಕ ದೋಟಿಹಾಳದಿಂದ ಮುದೇನೂರು, ಮುದಗಲ್, ತಾವರಗೇರಾ, ಸಿಂಧನೂರು, ಲಿಂಗಸೂರು, ರಾಯಚೂರು, ಬಾದಾಮಿ ಸೇರಿದ್ದಂತೆ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಹೋಗಲು ಅನುಕೂಲವಿದೆ.
10ಕ್ಕೂ ಹೆಚ್ಚು ಸಾರಿಗೆ ವಾಹನ, ನೂರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಈ ಸೇತುವೆ ಅಭಿವೃದ್ಧಿ ಪಡಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂದಿಸಿದ ಇಲಾಖೆಯವರು ಕಾಳಜಿ ತೋರುತ್ತಿಲ್ಲ, ಮಳೆ ಬಂದರೆ ಬೃಹತ್ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕೂಡಲೆ ಸೇತುವೆ ನಿರ್ಮಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.₹1 ಕೋಟಿ ಅನುದಾನ: ದೋಟಿಹಾಳದ ನವನಗರ ಸೇತುವೆ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ರು. ಮಂಜೂರಾಗಿದ್ದು, ಆದಷ್ಟು ಬೇಗನೆ ಸೇತುವೆ ನಿರ್ಮಾಣದ ಕಾಮಗಾರಿ ಆರಂಭಿಸಬೇಕು, ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕು ಎನ್ನುತ್ತಾರೆ ದೋಟಿಹಾಳದ ನಿವಾಸಿಗಳು.
ಕಾಮಗಾರಿ ಆರಂಭ ಶೀಘ್ರ: ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು ₹1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರು ಪ್ರಕ್ರಿಯೆ ಮುಗಿದಿದೆ. ಮಳೆಗಾಲ ಮುಗಿದ ಮೇಲೆ ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸಲಾಗುವುದು ಎಂದು ಕುಷ್ಟಗಿ ಪಿಡಬ್ಲ್ಯೂಡಿ ಎಇಇ ಸುಧಾಕರ ಹೇಳಿದರು.ದೋಟಿಹಾಳ ನವನಗರದ ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಈ ಕುರಿತು ಎಇಇ ಅವರಿಗೆ ಮಾತನಾಡಿದ್ದು, ಮಳೆಗಾಲ ಮುಗಿದ ಮೇಲೆ ಕಾಮಗಾರಿ ಆರಂಭಗೊಳಿಸುವುದು ಎಂದು ಭರವಸೆ ನೀಡಿದ್ದಾರೆ. ಕಾಯಬೇಕಿದೆ. ತಾತ್ಕಾಲಿಕವಾಗಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹೇಳಿದರು.