ಸಾರಾಂಶ
ಶಿಥಿಲಾವಸ್ಥೆಗೆ ತಲುಪಿದ ಕಟ್ಟಡದ ಚಾವಣಿ । ಹೊಸ ಕೇಂದ್ರಗಳಿಗೆ ಟೆಂಡರ್ ಕರೆಯಲು ಪಂಚಾಯತ್ ರಾಜ್ ವಿಭಾಗ ಸೂಚನೆ
ಎನ್.ಪಂಪನಗೌಡ ಬಾದನಹಟ್ಟಿಕನ್ನಡಪ್ರಭ ವಾರ್ತೆ ಕುರುಗೋಡು
ತಾಲೂಕಿನಲ್ಲಿ ಬಹುತೇಕ ಅಂಗನವಾಡಿ ಕಟ್ಟಡಗಳಿಗೆ ಮೂಲಸೌಕರ್ಯ ಇಲ್ಲದೆ ಮಕ್ಕಳು ಹಾಗೂ ಸಹಾಯಕಿಯರು ಪರದಾಡುತ್ತಿದ್ದಾರೆ. ಕೆಲವೆಡೆ ಸ್ವಂತ ಕಟ್ಟಡ ಇದ್ದು, ಇನ್ನು ಹಲವೆಡೆ ಬಾಡಿಗೆ ಕಟ್ಟಡದಲ್ಲಿ ಚಿಣ್ಣರು ಸಮುದಾಯ ಭವನ, ಶಾಲೆ ಕಟ್ಟಡ, ದೇವಸ್ಥಾನದಲ್ಲಿ ಪಾಠ ಕೇಳುವ ಪರಿಸ್ಥಿತಿ ಇದೆ.ತಾಲೂಕಿನಲ್ಲಿ ೧೦೦ ಸ್ವಂತ ಕಟ್ಟಡ, ೨೨ ಬಾಡಿಗೆ ಕಟ್ಟಡ, ೧ ಪಂಚಾಯಿತಿ ಕಟ್ಟಡದಲ್ಲಿ, ೧ ಸಮುದಾಯ ಭವನದಲ್ಲಿ, ೬ ಶಾಲೆ ಕಟ್ಟಡದಲ್ಲಿ, ಇತರೆ ಸರ್ಕಾರಿ ಕಟ್ಟಡದಲ್ಲಿ ೧ ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು ೧೩೧ ಅಂಗನವಾಡಿ ಕೇಂದ್ರಗಳು ಇವೆ.
ತಾಲೂಕಿನ ಬಾದನಹಟ್ಟಿ ಗ್ರಾಮದ ಬಳ್ಳಾರಿ ರಸ್ತೆಯಲ್ಲಿರುವ ೭ನೇ ಅಂಗನವಾಡಿ ಕೇಂದ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಹೌದು ಈ ಅಂಗನವಾಡಿ ಕೇಂದ್ರಕ್ಕೆ ನಿತ್ಯ ೩೩ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಆದರೆ ಅಂಗನವಾಡಿ ಕೇಂದ್ರ ಮುಖ್ಯರಸ್ತೆಯಲ್ಲಿದ್ದು, ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ.ಕಟ್ಟಡ ಶಿಥಿಲಗೊಂಡಿದೆ, ಪೋಷಕರು ಆತಂಕದಲ್ಲಿಯೇ ಮಕ್ಕಳನ್ನು ಶಾಲೆಗೆ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರದ ಚಾವಣಿ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುವಂತಾಗಿದೆ. ಮಳೆಗಾಲದಲ್ಲಿ ಕೊಠಡಿಗಳ ಚಾಲ್ಚಾವಣಿ ಅಲ್ಲಲ್ಲಿ ಸೋರಿ ಸಿಮೆಂಟ್ ಪದರು ಕೆಳಗೆ ಬೀಳಲು ತೊಡಗಿದೆ. ಇದರಿಂದ ಕೇಂದ್ರದಲ್ಲಿ ಮಕ್ಕಳನ್ನು ಕೂಡಿಸಿಕೊಳ್ಳುವುದು ಕಷ್ಟಕರವಾಗಿದೆ.ಕೇಂದ್ರದಲ್ಲಿ ದಾಸ್ತಾನು ಕೊಠಡಿ ಚಿಕ್ಕದಾಗಿದ್ದು, ದಾಸ್ತಾನು ಸಂಗ್ರಹಿಸಲು ತುಂಬಾ ಸಮಸ್ಯೆಆಗುತ್ತಿದೆ. ಇದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಆಹಾರ ತಯಾರಿಸುವುದೂ ಒಂದು ಕಡೆ ಕಷ್ಟಕರವಾದರೆ ಇನ್ನೊಂದು ಕಡೆ ಮಕ್ಕಳನ್ನು ಕೂಡಿಸಿಕೊಂಡು ಪಾಠ ಮಾಡುವುದು ಹೇಗೆ ಎಂಬ ಪ್ರಶ್ನೆ ಸಿಬ್ಬಂದಿಯನ್ನೂ ಕಾಡುತ್ತಿದೆ.
ಆಟದ ಮೈದಾನ ಮರೀಚಿಕೆ:ಕಟ್ಟಡ ಮುಖ್ಯರಸ್ತೆ ಪಕ್ಕದಲ್ಲಿ ಇರುವುದರಿಂದ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸರಿಯಾಗಿ ಆಟವಾಡಲು ಕೇಂದ್ರದ ಮುಂಭಾಗ ಮೈದಾನವಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆಟ-ಪಾಠಕ್ಕೂ ಕೇಂದ್ರದ ಒಳಗಡೆ ಮಕ್ಕಳು ಕಾಲ ಕಳೆಯಬೇಕಾಗಿದೆ. ಮಕ್ಕಳು ಕೇಂದ್ರದ ಹೊರಗಡೆ ಬಂದರೆ ಪಕ್ಕದಲ್ಲಿ ರಸ್ತೆ, ಮುಂಭಾಗದಲ್ಲಿ ಚರಂಡಿಗಳಿವೆ. ಇದರ ದುರ್ವಾಸನೆಯಿಂದ ಕೇಂದ್ರದ ಸಹಾಯಕಿ ಮತ್ತು ಮಕ್ಕಳಿಗೆ ನೆಮ್ಮದಿಯಿಲ್ಲದಂತಾಗಿದೆ.
ಕೇಂದ್ರದ ಪಕ್ಕದಲ್ಲಿಯೇ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಾರೆ. ಇದರಿಂದ ಮಕ್ಕಳು ಓಡಾಡದಂತಹ ಅಶುಚಿತ್ವದ ವಾತಾವರಣ ಉಂಟಾಗಿದೆ.ಕಟ್ಟಡ ರಿಪೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಅನುಮೋದನೆಗೊಳ್ಳದೆ ಇರುವುದರಿಂದ ಮಕ್ಕಳು ಹಾಗೂ ಸಹಾಯಕಿಯರು ಹಳೆಯ ಕಟ್ಟಡದಲ್ಲೇ ಇರಬೇಕಾಗಿದೆ. ಶೀಘ್ರ ಹೊಸ ಕಟ್ಟಡ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.