ಸಾರಾಂಶ
ಕೂಡ್ಲಿಗಿ: ವ್ಯಾಸ, ವಾಲ್ಮೀಕಿ ತಮ್ಮ ಸಮುದಾಯಗಳಿಗೆ ಸೀಮಿತವಾಗದೇ ಇಡೀ ಮನುಕುಲಕ್ಕೆ ಸಂದೇಶ ಸಾರುವ ಮೂಲಕ ಇಡೀ ಮನುಕುಲದ ಉದ್ಧಾರಕ್ಕೆ ಶ್ರಮಿಸಿದವರಾಗಿದ್ದಾರೆ. ತಳಸಮುದಾಯಗಳಲ್ಲಿ ಹುಟ್ಟಿ ಸಾಧನೆ ಮಾಡಿದರೆ ಅವರ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಕಟ್ಟಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಾರೆ ಎಂದು ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗ ವಿಭಾಗದ ನಿರ್ದೇಶಕ ಡಾ. ಅಮರೇಶ್ ಯತಗಲ್ ಹೇಳಿದರು.
ಅವರು ಪಟ್ಟಣದ ಚಂದ್ರಶೇಖರ್ ಆಜಾದ್ ರಂಗಮಂದಿರದ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ವೇದಿಕೆಯಲ್ಲಿ ತಾಲೂಕು ಆಡಳಿತ, ತಾಪಂ, ಪಪಂ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಸಹಕಾರದೊಂದಿಗೆ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಮಾಯಣ, ಮಹಾಭಾರತ ಈ ದೇಶದ ಮಹಾ ಕಾವ್ಯಗಳು. ಅವುಗಳಲ್ಲಿ ರಾಮಾಯಣ ಮೊದಲ ಶ್ರೇಷ್ಠ ಗ್ರಂಥವಾಗಿದ್ದು, ರಾಮಾಯಣವನ್ನು ರಚಿಸಿದ ವಾಲ್ಮೀಕಿ ಸರ್ವರ ಒಳಿತನ್ನೇ ಬಯಸಿದವರು. ಅವರ ಆದರ್ಶ ಎಂದೆಂದಿಗೂ ಅಜರಾಮರ ಎಂದು ಹೇಳಿದರು.ರಾಮಾಯಣ ಮತ್ತು ಮಹಾಭಾರತ ಎರಡು ಮಹಾ ಕಾವ್ಯಗಳು ಹಿಂದೆಯೂ, ಇಂದೂ, ಮುಂದೆಯೂ ಪ್ರಸ್ತುತವಾಗಿ ಜನಮನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಇದನ್ನು ಸಹಿಸಲಾಗದವರು ವಾಲ್ಮೀಕಿ ಬಗ್ಗೆ ಅವನೊಬ್ಬ ಕಳ್ಳ, ದರೋಡೆಕೋರ ಎನ್ನುವ ಕಟ್ಟುಕಥೆಗಳನ್ನು ಕಟ್ಟಿ, ಜನತೆಯ ಭಾವನೆಗಳ ಜತೆ ಆಟವಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆವಹಿಸಿದ್ದ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ಬಹುನಿರೀಕ್ಷಿತ ಹಾಗೂ ಕ್ಷೇತ್ರದ ರೈತರಿಗೆ ನೆರವಾಗುವಂಥ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈ ತಿಂಗಳ ಅಂತ್ಯದಲ್ಲಿ ಸಾಕಾರಗೊಳ್ಳಲಿದೆ ಎಂದು ಹೇಳಿದರು.ತಾಪಂ ಇಒ ನರಸಪ್ಪ, ತಹಸೀಲ್ದಾರ್ ರೇಣುಕಾ, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷೆ ಕೆ. ಲೀಲಾವತಿ ಪ್ರಭಾಕರ, ಪಪಂ ಮಾಜಿ ಅಧ್ಯಕ್ಷ ಉದಯ ಜನ್ನು, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಮೆಹಬೂಬ್ ಬಾಷಾ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್. ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ, ಜಿಪಂ ಮಾಜಿ ಅಧ್ಯಕ್ಷೆ ದೀನಾ ಮಂಜುನಾಥ, ಎಇಇ ನಾಗನಗೌಡ, ಮುಖಂಡರಾದ ಬಂಗಾರು ಸೋಮಣ್ಣ, ಮಲ್ಲಾಪುರ ಭರಮಪ್ಪ, ಗುಂಡುಮುಣುಗು ಪ್ರಕಾಶ್, ಹಿರೇಕುಂಬಳಗುಂಟೆ ಉಮೇಶ್, ಎಸ್. ದುರುಗೇಶ್, ಮಂಜು ಮಯೂರ, ಡಿ.ಎಚ್. ದುರುಗೇಶ, ಹುಡೇಂ ಪಾಪನಾಯಕ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಫೋಟೋ ಸಿದ್ದಲಿಂಗಪ್ಪ, ಜಿ. ಒಬಣ್ಣ, ದೇವರಮನಿ ಮಹೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಶಿವರಾಜ್, ಬಣವಿಕಲ್ಲು ಯರಿಸ್ವಾಮಿ, ಗಾಣಗಟ್ಟೆ ಮಹಾಂತೇಶ, ಮಾದಿಹಳ್ಳಿ ನಜೀರ್ ಇತರರಿದ್ದರು.
ತಾಲೂಕಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತ ಬಿ. ನಾಗರಾಜ, ಮಂಗಳಮುಖಿ ಮೊರಬದ ಸ್ನೇಹಾ, ದೇಶಿತಳಿ ದನಗಳ ಸಂರಕ್ಷಕ ಸೂಲದಹಳ್ಳಿ ಗಾಣದ ಬಸಪ್ಪ, ರಂಗನಟಿ ಕೆ. ಜ್ಯೋತಿ, ಹೋರಾಟಗಾರರಾದ ಗುನ್ನಳ್ಳಿ ರಾಘವೇಂದ್ರ, ಮೊರಬನಹಳ್ಳಿ ವೀರಣ್ಣ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು. ಶಾಲಾ, ಕಾಲೇಜಿನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.ಶಾಸಕರ ಡ್ಯಾನ್ಸ್: ಡಾ.ಎನ್.ಟಿ. ಶ್ರೀನಿವಾಸ್ ಅವರು ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಆನಂತರ ಜಾನಪದ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಡಿಜೆ ಸೌಂಡ್‌ಗೆ ಯುವಕರು ಕುಣಿದು ಸಂಭ್ರಮಿಸುತ್ತಿದ್ದರೆ, ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಸ್ಟೆಪ್ ಹಾಕುವ ಮೂಲಕ ಯುವಕರಿಗೆ ಸಾಥ್ ಕೊಟ್ಟರು.