ಸಾರಾಂಶ
ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಅಕ್ಷರಶಃ ಹೈರಾಣಾಗಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆ ಕಟಾವು ಮಾಡಲು ಆಗದೆ ಕೊಳೆತು ಕೋಟ್ಯಂತರ ರುಪಾಯಿ ಹಾನಿಯಾಗುತ್ತಿರುವುದರಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ.
- ಕೋಟ್ಯಂತರ ರುಪಾಯಿ ಬೆಳೆ ಹಾನಿಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಅಕ್ಷರಶಃ ಹೈರಾಣಾಗಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆ ಕಟಾವು ಮಾಡಲು ಆಗದೆ ಕೊಳೆತು ಕೋಟ್ಯಂತರ ರುಪಾಯಿ ಹಾನಿಯಾಗುತ್ತಿರುವುದರಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ.ಸಕಾಲಕ್ಕೆ ಮಳೆಯಾಗಿದ್ದರಿಂದ ಮಂಗಾರು ಬೆಳೆ ಅತ್ಯುತ್ತಮವಾಗಿ ಬಂದಿತ್ತು. ಆದರೆ, ಕಟಾವಿಗೆ ಬಂದಾಗ ಅತೀಯಾದ ಮಳೆಯಿಂದಾಗಿ ಕಟಾವು ಮಾಡಲು ಆಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ರೈತರು ಶಪಿಸುತ್ತಿದ್ದಾರೆ.
ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿದ್ದ ಬೆಳೆ ಕಾರಟಗಿ, ಕನಕಗಿರಿ, ಗಂಗಾವತಿ ಸೇರಿದಂತೆ ವಿವಿಧೆಡೆ ಸಾವಿರಾರು ಎಕರೆ ಪ್ರದೇಶದಷ್ಟು ಭತ್ತ ನೆಲಕ್ಕೆ ಬಿದ್ದಿದ್ದು, ಕೋಟ್ಯಂತರ ರುಪಾಯಿ ಹಾನಿಯಾಗಿದೆ.ಕೊಪ್ಪಳ ತಾಲೂಕಿನ ವಿವಿಧೆಡೆ ದಾಳಿಂಬೆ, ಈರುಳ್ಳಿ, ಮೆಕ್ಕೆಜೋಳ ಕಟಾವಿಗೆ ಬಂದಿದ್ದು ಹಾನಿಯಾಗಿದೆ. ಬೆಟಗೇರಿ ಗ್ರಾಮದಲ್ಲಿ ಎಂಟು ಎಕರೆ ಪಪ್ಪಾಯಿ ತೋಟ ಸಂಪೂರ್ಣ ನೆಲಕಚ್ಚಿದೆ.
ಜಿಲ್ಲಾದ್ಯಂತ ಹೀಗೆ ಕಟಾವಿಗೆ ಬಂದಿದ್ದ ಬೆಳೆಗಳನ್ನು ರೈತರು ಸಂರಕ್ಷಣೆ ಮಾಡಿಕೊಳ್ಳಲು ಹೈರಾಣಾಗುತ್ತಿದ್ದಾರೆ. ರೈತರು ಮಳೆಯಲ್ಲಿಯೇ ರಾಶಿಗಳನ್ನು ಕಾಪಾಡಿಕೊಳ್ಳಲು ಶತಾಯಗತಾಯ ಶ್ರಮಿಸುತ್ತಿದ್ದಾರೆ.ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ಸುಭಾಸ ನಾಟಿಕೇರ ಅವರ ಐದು ಎಕರೆಯಲ್ಲಿ ಬೆಳೆಯಲಾಗಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಲಕ್ಷಾಂತರ ರುಪಾಯಿ ಹಾನಿಯಾಗುವಂತೆ ಆಗಿದೆ.
ಇದು, ಕೇವಲ ಇವರೊಬ್ಬರ ಕತೆಯಲ್ಲ, ಕಟಾವಿಗೆ ಬಂದಿರುವ ಬೆಳೆ ರಾಶಿ ಮಾಡುವ ವೇಳೆಯಲ್ಲಿ ಕೊಳೆಯುತ್ತಿರುವುದು ರೈತರನ್ನು ಕಂಗೆಡಿಸಿದೆ.