ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ, ವಿದ್ಯುತ್ ಇಲಾಖೆ ನೌಕರರು, ವಿವಿಧ ಕನ್ನಡ ಪರ ಸಂಘಟನೆ ಮುಖಂಡರು, ಸಾರ್ವಜನಿಕರು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಸೇರಿ ಸರ್ಕಾರ ಹೊಸದಾಗಿ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವುದನ್ನು ವಿವಿಧ ಕನ್ನಡ ಪರ ಸಂಘಟನೆ ಮುಖಂಡರು, ಸಾರ್ವಜನಿಕರು ಹಾಗೂ ವಿದ್ಯುತ್ ಇಲಾಖೆ ನೌಕರರು ತೀವ್ರವಾಗಿ ಖಂಡಿಸಿದರು.

ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಿದರೆ ರೈತರು ಹಾಗೂ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ. ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ ಖಾಸಗೀಕರಣ ಮಾಡಿದ ವೇಳೆ ಎಲ್ಲವೂ ಸ್ಥಗಿತಗೊಳಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಮನೆಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರದ ಅಧೀನದಲ್ಲಿಯೇ ಇಲಾಖೆ ಉಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಚೇತನಾ ಅವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು.


ಇದಕ್ಕೂ ಮುನ್ನ ವಿದ್ಯುತ್ ಇಲಾಖೆ ನೌಕರರು ಹಾಗೂ ಸಿಬ್ಬಂದಿ ಶ್ರೀರಂಗಪಟ್ಟಣ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ವಿದ್ಯುತ್ ಇಲಾಖೆ ಕಚೇರಿಯಿಂದ ಪಟ್ಟಣದ ಮುಖ್ಯ ಬೀದಿ ಮೂಲಕ ತಹಸೀಲ್ದಾರ್ ಕಚೇರಿಗೆ ಮೆರವಣಿಗೆ ನಡೆಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಶಂಭುಗೌಡ, ರೈತ ಮುಖಂಡರಾದ ಜಯರಾಮು, ದೊಡ್ಡಪಾಳ್ಯ, ಮೇಳಾಪುರ ಸ್ವಾಮೀಗೌಡ, ಬಿ.ಎಸ್. ರಮೇಶ್, ಇಲಾಖೆ ಅಧಿಕಾರಿಗಳಾದ ಎಇಇ ಮಂಜುನಾಥ್ ಪ್ರಸಾದ್, ಎಇ ಪ್ರದೀಪ್ ಕುಮಾರ್, ಸಂತೋಷ್ ಕುಮಾರ್ ಸೇರಿದಂತೆ ವಿದ್ಯುತ್ ಇಲಾಖೆ ನೌಕರರು, ಸಿಬ್ಬಂದಿ ವರ್ಗ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

------------

17ಕೆಎಂಎನ್ ಡಿ24

ಶ್ರೀರಂಗಪಟ್ಟಣದ ತಾಲೂಕು ಕಚೇರಿ ಎದುರು ವಿದ್ಯುತ್ ಇಲಾಖೆ ನೌಕರರು, ವಿವಿಧ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.