ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪದೇಪದೇ ಹಿಂದೂ ಧರ್ಮ, ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡುತ್ತಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಇಲ್ಲಿನ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದೂ ಜನಜಾಗೃತಿ ಸಮಿತಿಯ ಪರಶುರಾಮ ಮಾತನಾಡಿ, ಹರಿಹರದಲ್ಲಿ ಪ್ರೊ. ಬಿ.ಕೃಷ್ಣಪ್ಪ ಹಾಗೂ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್.ಭಗವಾನ್ ಎಂಬ " ವಿಚಾರವ್ಯಾಧಿ " ಸಾರ್ವಜನಿಕ ವೇದಿಕೆಯಲ್ಲಿ ಹಿಂದೂ ಧರ್ಮ,ಶ್ರೀರಾಮನ ಕುರಿತು ಅವಹೇಳನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪ್ರಭು ಶ್ರೀರಾಮರ ಕುರಿತು ಆಧಾರರಹಿತ ಆರೋಪಗಳನ್ನು ಮಾಡುವುದರ ಜೊತೆಗೆ ಹಿಂದೂ ಧರ್ಮದ ನಂಬಿಕೆಗಳು,ಧಾರ್ಮಿಕ ಆಚರಣೆ ಮತ್ತು ದೇವತೆಗಳ ಕುರಿತು ಅವಮಾನಕಾರಿಯಾಗಿ ಮಾತನಾಡಿರುವುದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿ ಉಂಟಾಗಿದೆ ಎಂದು ತಿಳಿಸಿದರು.
ಮನುಸೃತಿಯನ್ನು ಉಲ್ಲೇಖಿಸಿ ಶ್ರೀ ರಾಮಚಂದ್ರ,ದಶರಥ ಮಹಾರಾಜರ ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ನಾಲಗೆಯನ್ನು ಹರಿಬಿಟ್ಟಿರುವ ಭಗವಾನ್, ಪ್ರಭು ಶ್ರೀರಾಮ,ಶ್ರೀಕೃಷ್ಣ,ಭಗವದ್ಗೀತೆ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ಹಲವು ಬಾರಿ ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ರಾಜ್ಯದಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದು ಆ ಸಂದರ್ಬದಲ್ಲಿ ಅವರ ವಿರುದ್ಧ ವಿವಿಧೆಡೆ ದೂರುಗಳು ದಾಖಲಾಗಿದ್ದರೂ ಪುನಃ ಪುನಃ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೃತ್ಯವಾಗಿ ಕಂಡು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರೂ, ಯಾವುದೇ ಧರ್ಮ, ದೇವತೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಹಕ್ಕು ನೀಡಿಲ್ಲ. ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳು ಸಾರ್ವಜನಿಕ ಶಾಂತಿ, ಸೌಹಾರ್ದತೆಗೆ ಅಪಾಯ ಉಂಟು ಮಾಡುತ್ತವೆ. ಈ ದಿಸೆಯಲ್ಲಿ ಪ್ರೊ.ಭಗವಾನ್ ಕಾರ್ಯಕ್ರಮದಲ್ಲಿ ನೀಡಿರುವ ಭಾಷಣದ ಸಂಪೂರ್ಣ ವಿಡಿಯೋ, ಧ್ವನಿಮುದ್ರಣ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಅವರ ವಿರುದ್ಧ ಅನ್ವಯವಾಗುವ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರದಲ್ಲಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು
ಹಿಂದೂ ಜನಜಾಗೃತಿ ಸಮಿತಿಯ ಈರೇಶ್, ಗುರುರಾಜ್ ಜಗತಾಪ್, ಶರತ್, ಭಾಸ್ಕರ್ ನಾಯ್ಡು, ಅಜಿತ್ ನಾಯ್ಡು, ಸುನಿಲ್ ಮಾಳ್ವೆ, ದರ್ಶನ್, ಪ್ರಕಾಶ್, ಸಂತೋಷ್ ಮತ್ತಿತರರು ಹಾಜರಿದ್ದರು.