ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಾತಿ, ನಂಬಿಕೆ, ಮತದ ಹೆಸರಿನಲ್ಲಿ ಛಿದ್ರವಾಗಿರುವ ಸಮಾಜವನ್ನು ಒಗ್ಗೂಡಿಸುವಲ್ಲಿ ಹಾಗೂ ಸುಂದರ, ಉತ್ತಮ, ಸುಖ, ಶಾಂತಿ, ನೆಮ್ಮದಿ ಮತ್ತು ಒಗ್ಗಟ್ಟಿನಿಂದ ಕೂಡಿದ ಸಮಾಜವನ್ನು ನಿರ್ಮಿಸುವಲ್ಲಿ ಮಹಿಳೆಯರಿಗೆ ವೇದಜ್ಞಾನ ಅತಿಮುಖ್ಯವಾಗಿದೆ ಎಂದು ಬೆಂಗಳೂರಿನ ಖ್ಯಾತ ವಾಗ್ಮಿಗಳಾದ ಅಮೃತವರ್ಷಿಣಿ ಅಭಿಪ್ರಾಯಪಟ್ಟರು.ಅವರು ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ, ಬ್ರಾಹ್ಮಣ ಸೇವಾ ಸಂಘ ಮತ್ತು ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಯುಕ್ತಾಶ್ರಯದಲ್ಲಿ ತುಮಕೂರಿನ ಬ್ರಾಹ್ಮಣ ಸೇವಾಸಂಘದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಮಹಿಳೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.ಭಾರತೀಯ ಸಂಸ್ಕೃತಿ, ಪರಂಪರೆ, ಮಾನವೀಯತೆ ಹಾಗೂ ವೈದಿಕಧರ್ಮವನ್ನು ಉಳಿಸುವಲ್ಲಿ ಮಹಿಳೆಯ ಪಾತ್ರ ಮಹತ್ತರವಾಗಿದೆ. ಇಂದು ಜಾತಿ, ಮತ, ನಂಬಿಕೆಯ ಹೆಸರಿನಲ್ಲಿ ಸಮಾಜ ಛಿದ್ರವಾಗಿದೆ. ಇದನ್ನು ಸರಿದಾರಿಗೆ ತರಲು ವೈದಿಕ ಧರ್ಮದಿಂದ ಮಾತ್ರ ಸಾಧ್ಯ ಎಂದರು.ಮಾನವೀಯತೆಯೇ ವೈದಿಕಧರ್ಮದ ಮೂಲವಾಗಿದೆ. ಸುಖ, ಸಂತೋಷ, ಶಾಂತಿಗೆ ವೈದಿಕಧರ್ಮ ಕಾರಣ. ವೇದಗಳು ಮಾನವೀಯ ಧರ್ಮವನ್ನು ಪ್ರತಿಪಾದನೆ ಮಾಡುತ್ತವೆ ಎಂದು ಹಲವು ನಿದರ್ಶನಗಳೊಂದಿಗೆ ವಿವರಿಸಿದ ಅವರು, ಇಂದು ಇಡೀ ಜಗತ್ತೇ ಬದಲಾದ ಕಾಲಘಟ್ಟದಲ್ಲಿದೆ. ಹಿಂದೆ ಮಹಿಳೆ ಕೇವಲ ಅಡುಗೆಮನೆಗೆ ಮಾತ್ರ ಸೀಮಿತ ಎಂಬ ಭಾವನೆಯಿತ್ತು. ಆದರೆ ಇಂದು ಮಹಿಳೆ ಸ್ವಸಾಮರ್ಥ್ಯದಿಂದ ಪುರುಷರಿಗೆ ಸರಿಸಮವಾಗಿ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ ಎಂದರು.ಆದರೆ ಅತಿಯಾದ ವಿದೇಶಿ ಅನುಕರಣೆಯಿಂದ ಇದು ವಿಕೃತಿಯ ಕಡೆಗೂ ಸಾಗುವಂತಿದೆ. ಹೆಣ್ಣಿಗೆ ದೇಹ ಪ್ರದರ್ಶನಕ್ಕಿಂತ ಜ್ಞಾನ ಪ್ರದರ್ಶನ ಅತ್ಯಂತ ಅಗತ್ಯ. ಹೆಣ್ಣಿಗೆ ತಾಯ್ತನ ಎಂಬುದು ಸಹಜವಾಗಿ ಪ್ರಕೃತಿಯಿಂದ ದೊರೆತಿರುವ ಕೊಡುಗೆ. ಅದನ್ನು ಬಂಧನ ಎಂದು ಭಾವಿಸುವ ಬದಲು ಅದು ನಮ್ಮ ಸಾಮರ್ಥ್ಯ. ಇಡೀ ಜಗತ್ತು ಸೃಷ್ಟಿಯಾಗಿರುವುದೇ ನಮ್ಮಿಂದ ಎಂದು ಹೆಮ್ಮೆ ಪಡಬೇಕು. ತಾಯಿ-ಮಗುವಿನ ಸಂಬಂಧ ಪ್ರಕೃತಿದತ್ತ ಕೊಡುಗೆ. ಮಗುವಿಗೆ ಚಿಕ್ಕ ವಯಸ್ಸಿನಲ್ಲಿಯೇ ಸೂಕ್ತ ಸಂಸ್ಕಾರವನ್ನು ನೀಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿವುದು ತಾಯಿಯ ಕರ್ತವ್ಯ. ಉತ್ತಮ ವ್ಯಕ್ತಿಯಿಂದ ಉತ್ತಮ ಕುಟುಂಬ. ಅದರಿಂದ ಉತ್ತಮ ಸಮಾಜ ನಿರ್ಮಾಣವಾಗುವುದು. ಅಂದರೆ ಇಡೀ ಸಮಾಜದ ನಿರ್ಮಾಣ ತಾಯಿಯ ಕೈಯಲ್ಲಿದೆ. ಇದನ್ನು ಪ್ರತಿಯೊಬ್ಬ ಮಹಿಳೆಯೂ ಅರ್ಥೈಸಿಕೊಳ್ಳಬೇಕು ಎಂದು ಅವರು ಆಶಿಸಿದರು.ಮುಖ್ಯ ಅತಿಥಿಗಳಾಗಿದ್ದ ತುಮಕೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಎಂ. ಮಂಗಳಗೌರಿ ಅವರು ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯನ್ನು ಪ್ರಕೃತಿಗೆ ಹೋಲಿಸಲಾಗಿದ್ದು, ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಅನೇಕ ವಿಷಯಗಳಲ್ಲಿ ಮಹಿಳೆ ಮತ್ತು ಪುರುಷರಲ್ಲಿ ಸಮಾನ ಆಲೋಚನೆಯನ್ನು ಕಾಣಬಹುದಾಗಿದೆ ಎಂದು ನಿದರ್ಶನಗಳೊಂದಿಗೆ ವಿವರಿಸಿದರು.ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಭಾದ ಜಿಲ್ಲಾ ಪ್ರತಿನಿಧಿ ಡಾ.ಎಚ್.ಹರೀಶ್, ಜಿಲ್ಲಾ ಬ್ರಾಹ್ಮಣ ಸಭಾ ಉಪಾಧ್ಯಕ್ಷೆ ಸುಭಾಷಿಣಿ ರವೀಶ್, ಕಾರ್ಯದರ್ಶಿ ಡಿ.ಎಸ್.ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ, ಶುಭಾ ಮತ್ತು ಶ್ರೀಮತಿ ವೇದಘೋಷ ಮಾಡಿದರು. ಶೈಲಜಾ ವೆಂಕಟೇಶ್ ಪ್ರಾರ್ಥಿಸಿದರು. ಸುಭಾಷಿಣಿ ಸ್ವಾಗತಿಸಿದರು. ಸೌಮ್ಯರವಿ ಮತ್ತು ಭಾರತಿ ಶ್ರೀನಿವಾಸ್ ನಿರೂಪಿಸಿದರು. ರಚಿತಾ ಪ್ರಕಾಶ್ ವಂದಿಸಿದರು.