ಸಿಎಂ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮುತ್ತಿಗೆ: ಮಲ್ಲಿಕಾರ್ಜುನ್

| Published : Oct 14 2025, 01:00 AM IST

ಸಿಎಂ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮುತ್ತಿಗೆ: ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಚಳವಳಿ ನಡೆಸುತ್ತಿರುವ ರೈತರ ಅಹವಾಲುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ ತಿಂಗಳೊಳಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮುತ್ತಿಗೆ ಹಾಕಲಾಗುವುದು ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಚಳವಳಿ ನಡೆಸುತ್ತಿರುವ ರೈತರ ಅಹವಾಲುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ ತಿಂಗಳೊಳಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮುತ್ತಿಗೆ ಹಾಕಲಾಗುವುದು ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಸಹಸ್ರಾರು ರೈತರು ಜಾನುವಾರಗಳ ಸಮೇತ ಮುಖ್ಯಮಂತ್ರಿಗಳ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತೇವೆ. ಈ ಕಾಲ್ನಡಿಗೆಯಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವ, ಚಿತ್ರನಟ ಅಹಿಂಸಾ ಚೇತನ್, ರೈತಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಲಿದ್ದು, ರೈತರು ಹಾಗೂ ನಾಗರಿಕರ ಅಭಿಪ್ರಾಯ ಸಂಗ್ರಹಿಸಿ ಕಾಲ್ನಡಿಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ ಪ್ರತ್ಯಾರೋಪ ಮಾಡುತ್ತಾ ರೈತರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಇನ್ನು ವಿರೋಧ ಪಕ್ಷ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕಾಟಾಚಾರದ ಹೋರಾಟ ಮಾಡಿ ಹೋದವರು ತಿರುಗಿಯೂ ನೋಡಿಲ್ಲ. ಟೌನ್ ಶಿಪ್ ಯೋಜನೆ ವಿಚಾರವನ್ನು ವಿಧಾನಸಭೆ ಹಾಗೂ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿಯೇ ಇಲ್ಲ. ಇದು ವಿಪಕ್ಷದವರ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

ಆಡಳಿತ ನಡೆಸುವವರಿಗೆ ಸಂವೇದನಾಶೀಲತೆ ಇರಬೇಕು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರು ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಬರುವ ಮುನ್ನವೇ ಸಿದ್ದರಾಮಯ್ಯ ಖುದ್ಧಾಗಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಬೇಕು. ಇಲ್ಲವೆ ಸರ್ಕಾರದಿಂದ ಸಮಿತಿ ರಚಿಸಿ ರೈತರ ಅಹವಾಲು ಕೇಳಬೇಕು ಎಂದು ಹೇಳಿದರು.

ರೈತ ಮುಖಂಡ ಬೈರಮಂಗಲ ಆನಂದ್ ಮಾತನಾಡಿ, ಬಿಡದಿ ಉಪನಗರದ ಹೆಸರಿನಲ್ಲಿ ಕೃಷಿ ಮತ್ತು ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಕಂದಾಯ ಗ್ರಾಮಗಳನ್ನು ಹೇಳ ಹೆಸರಿಲ್ಲದಂತೆ ನಾಶ ಮಾಡಿ ಜನ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ, ಸಹಸ್ರಾರು ಗಿಡ ಮರಗಳ ಮಾರಣ ಹೋಮ ಮಾಡುವ ಸರ್ಕಾರದ ರೈತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪನಗರ ಯೋಜನೆಗೆ ಶೇಕಡ 80ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಅದನ್ನು ಸಾಬೀತು ಪಡಿಸಲಿ. ಹಾಗೊಂದು ವೇಳೆ ರೈತರು ಒಪ್ಪಿಗೆ ನೀಡಿದ್ದರೆ ಪೊಲೀಸರ ಬಲ ಉಪಯೋಗಿಸಿಕೊಂಡು ಏಕೆ ಜೆಎಂಸಿ ನಡೆಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಜಿಲ್ಲಾಡಳಿತದೊಂದಿಗೆ ರೈತರ ಸಭೆ ನಡೆಸಲು ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಬೇಕು. ಆದರೆ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಶೀಘ್ರದಲ್ಲಿಯೇ ರೈತರ ಸಭೆ ಕರೆಯುವ ಭರವಸೆ ನೀಡಿದ್ದು, ಅದರಲ್ಲಿ 26 ಹಳ್ಳಿಗಳ ರೈತರು ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸುತ್ತೇವೆ. ಅಲ್ಲಿವರೆಗೆ ಜೆಎಂಸಿ ಮಾಡಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಮಂಜು, ನಾಗೇಶ್ ಕುಮಾರ್ , ಅನುಕುಮಾರ್ , ಶಿವುಗೂಳಿಗೌಡ, ಚನ್ನಪ್ಪ, ಚಂದ್ರೇಗೌಡ, ಹರೀಶ್ ಕುಮಾರ್ ಮತ್ತಿತರರು ಇದ್ದರು.

ಬಾಕ್ಸ್‌......

ಬಿಗ್‌ಬಾಸ್‌ಗಿರುವಷ್ಟು ಗೌರವ ರೈತರಿಗಿಲ್ಲಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಕೊಡುವಷ್ಟು ಆದ್ಯತೆ ರೈತರಿಗಿಲ್ಲ. ಕಾನೂನು ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಗ್ ಬಾಸ್ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿಯಲಾಗಿತ್ತು. ಪ್ರಭಾವಿಗಳು ಹೇಳಿದರೆಂದು ರಾತ್ರೋರಾತ್ರಿ ಬೀಗ ತೆಗೆದು ತಮಗಿಷ್ಟ ಬಂದಂತೆ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೀಲಿ ಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ್ ಟೀಕಿಸಿದರು.

13ಕೆಆರ್ ಎಂಎನ್ 1.ಜೆಪಿಜಿ

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.