ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ ಗ್ರಾಪಂ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಒತ್ತುವರಿ ತೆರವಿಗೆ ಆಗಮಿಸಿದ ತಾಪಂ ಇಒ ಸುನಿಲ್ ಕುಮಾರ್ ಅವರಿಗೆ ದಲಿತ ಸಂಘಟನೆ ಮುಖಂಡರು ತೆರವು ಕಾರ್ಯ ತಡೆದು ಪ್ರತಿಭಟಿಸಿ, ತಾಲೂಕಿನಲ್ಲಿ ಆಗಿರುವ ಒತ್ತುವರಿ ತೆರವು ಮಾಡಿಸುವಂತೆ ಒತ್ತಾಯಿಸಿದರು.ಗ್ರಾಮದಲ್ಲಿ ಜ್ಯೋತಿ ಎಂಬವವರು ಸರ್ವೇ ಸಂಖ್ಯೆ 16/10 ರಲ್ಲಿ ವಾಸಕ್ಕಾಗಿ ಮನೆ ನಿರ್ಮಿಸಿಕೊಂಡಿದ್ದರು. ಈ ಜಾಗಕ್ಕೆ ಪಂಚಾಯಿತಿ ವತಿಯಿಂದ ಈ ಸ್ವತ್ತು ಕೂಡ ಮಾಡಿಕೊಡಲಾಗಿದೆ ಹಾಗೂ ಚೆಕ್ಕು ಬಂದಿ ಪಹಣಿಯಲ್ಲಿ ಸರ್ವೇ ಸಂಖ್ಯೆಯಲ್ಲಿ ರಸ್ತೆಯನ್ನು ಕೂಡ ತೋರಿಸಿಲ್ಲ. ಆದರೆ ಕಂದಾಯ ಇಲಾಖೆ ಮತ್ತು ಪಂಚಾಯಿತಿ ಇಲಾಖೆ ವಿನಃಕಾರಣ ದಲಿತ ವ್ಯಕ್ತಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆ ಮುಖಂಡರು ತೆರವು ಕಾರ್ಯವನ್ನು ತಡೆದು ಪ್ರತಿಭಟಿಸಿದರು.ದಲಿತ ಮುಖಂಡ, ಗ್ರಾಪಂ ಉಪಾಧ್ಯಕ್ಷ ಶಿವರಾಜ್ ಮಾತನಾಡಿ, ತಾಲೂನಾದ್ಯಂತ ಸಾಕಷ್ಟು ಸರ್ಕಾರಿ ಜಾಗಗಳನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಅನುಭೋಗದಲ್ಲಿದ್ದಾರೆ. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಆದರೆ ಯಾರದೋ ಒತ್ತಡಕ್ಕೆ ಮಣಿದು ದಲಿತ ವ್ಯಕ್ತಿ ವಾಸಕ್ಕಾಗಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಖಂಡನಿಯವಾದದ್ದು, ಈ ಒತ್ತುವರಿ ತೆರವಿಗೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಪಂ ಇಒ ಸುನಿಲ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಈಗಗಾಗಲೇ ಸಾಕಷ್ಟು ಒತ್ತುವರಿ ತೆರವು ಕಾರ್ಯಗಳನ್ನು ಮಾಡಿ ಸರ್ಕಾರಿ ಜಾಗ ವಶಕ್ಕೆ ಪಡೆದಿದ್ದೇವೆ. ಒತ್ತುವರಿ ತೆರವಿನ ಬಗ್ಗೆ ಇಒಗಳಿಗೆ ಸಂಪೂರ್ಣ ಜವಾಬ್ದಾರಿ ಇದೆ. ಸಾರ್ವಜನಿಕರು ಕರ್ತವ್ಯಕ್ಕೆ ಅಡ್ಡಿಪಡಿಸದೆ ಸಹಕರಿಸಬೇಕು ಎಂದರು.ಅಂತಿಮವಾಗಿ ತಾಲೂಕಿನ ಇತರೆ ಒತ್ತುವರಿ ಜಾಗವನ್ನು ತೆರವು ಮಾಡಿಸಲು ಇಲಾಖೆ ಕ್ರಮವಹಿಸುತ್ತದೆ ಎಂದು ಇಒ ನೀಡಿದ ಭರವಸೆ ಮೇರೆಗೆ ಒಪ್ಪಂದದಂತೆ ತೆರವು ಕಾರ್ಯಕ್ಕೆ ಸಹಕಾರ ನೀಡಲಾಯಿತು.ಬೆಟ್ಟದಪುರ ಎಸ್‌ಐ ಅಜಯ್ ಕುಮಾರ್, ರವಿಕುಮಾರ್, ಸ್ವಾಮಿ ನಾಯಕ, ಭೂ ಮಾಪನ ಇಲಾಖೆ ಶಿವಪ್ಪಚಾರ್, ಕುಮಾರ್, ಮುಖಂಡರಾದ ತಮ್ಮಣ್ಣಯ್ಯ, ಈರಾಜ್, ಶಿವರಾಜ್, ಜಗದೀಶ್, ಗಿರೀಶ್, ಪುಟ್ಟರಾಜು, ರಾಜಣ್ಣ, ಜಯಣ್ಣ, ಮಹದೇವ್, ರಾಜು ಇದ್ದರು.