ವೇಮನರು ಜಗತ್ತು ಕಂಡ ಮಹಾನ್ ಯೋಗಿ: ಸಚಿವ ಎಚ್.ಕೆ. ಪಾಟೀಲ

| Published : Jan 20 2025, 01:32 AM IST

ಸಾರಾಂಶ

ವೇಮನರು ಜಗತ್ತು ಕಂಡ ಮಹಾನ್ ಯೋಗಿ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ರಾಣಿಬೆನ್ನೂರು: ವೇಮನರು ಜಗತ್ತು ಕಂಡ ಮಹಾನ್ ಯೋಗಿ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ವೇಮನ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ವೇಮನ ಜಯಂತಿ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೇಮನರನ್ನು ಬ್ರಿಟಿಷ್ ಅಧಿಕಾರಿ ಸಿ.ಪಿ.ಬ್ರೌನ್ ಗುರುತಿಸಿದರು. ದೇವರು ನಿನ್ನೊಳಗೆ ಇದ್ದಾನೆ ಎಂದು ವೇಮನರು ತಿಳಿದಿದ್ದಾರೆ. ವೇಮನರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಗರದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ವೇಮನ ವಿದ್ಯಾವರ್ಧಕ ಸಂಘಕ್ಕೆ ಮೊದಲ ಕಂತಾಗಿ 50 ಲಕ್ಷ ರು.ಗಳನ್ನು ನೀಡುತ್ತೇನೆ. ಮುಂದಿನ ವರ್ಷ ನೂತನ ಕಲ್ಯಾಣ ಮಂಟಪದಲ್ಲಿ ವೇಮನ ಜಯಂತಿ ಆಚರಿಸುವಂತಾಗಬೇಕು. ಸಮಾಜವನ್ನು 3 ಬಿ ವರ್ಗಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇದ್ದರೂ ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ನಾವು ಜಾತಿ ಶಕ್ತಿ ಮೇಲೆ ಬೆಳೆದು ಬಂದವರಲ್ಲ. ರಾಜ್ಯದಲ್ಲಿ ಸರ್ಕಾರದ ವತಿಯಿಂದ ವೇಮನ ಜಯಂತಿ ಆಚರಿಸಲು ಪ್ರಾರಂಭಿಸಿದ ನಂತರ ಆಂಧ್ರಪ್ರದೇಶದಲ್ಲಿ ವೇಮನ ಯೂನಿವರ್ಸಿಟಿ ಆಯಿತು ಎಂದರು.ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ರೆಡ್ಡಿ ಸಮಾಜದ ಸಹಕಾರದಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಯಿತು. ಹಾವೇರಿ ನಗರದಲ್ಲಿ ರೆಡ್ಡಿ ಸಮುದಾಯಕ್ಕೆ ಒಂದು ಸೈಟನ್ನು ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ದಾನ ಮಾಡುವ ಮನಸ್ಸು ವೇಮನರವರಿಗಿತ್ತು. ರಡ್ಡಿ ಸಮಾಜದ ಒಂದೇ ಮನೆ ಇದ್ದರೂ ಗೌರವ ಮನೋಭಾವದಿಂದ ನೋಡತಾರೆ. ಕಷ್ಟದ ಸಮಯದಲ್ಲಿ ಸಹಾಯ ಮಾಡುವವರು ರೆಡ್ಡಿ ಸಮುದಾಯದವರು.ಅನೇಕ ಜನ‌ ಹಿರಿಯರು ಸಮುದಾಯದ ಕಲ್ಯಾಣ ಮಂಟಪಕ್ಕೆ ಒಂದು‌ ಕೋಟಿ ಶಾಸಕರ ಅನುಧಾನ ಕೂಡಿಟ್ಟ ಹಣವನ್ನು ಡಿ ಸಿ ಯವರ ಮುಖಾಂತರ ವೇಮನ ವಿದ್ಯಾವರ್ಧಕ ಸಂಘಕ್ಕೆ ತಲುಪಿಸುವೆ ಎಂದರು.ಸಮಾರಂಭದಲ್ಲಿ ವೇಮನರ ಜೀವನ ಕುರಿತ ರಚಿಸಿದ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.