ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಂದಕ್ಕೂ ಪೊಲೀಸ್ ಇಲಾಖೆಯನ್ನು ಗುರಿಯಾಗಿಸಿಕೊಂಡು ದೂರುವುದು ಸರಿಯಲ್ಲ. ಪೊಲೀಸರು ಇರುವುದು ಜನರ ರಕ್ಷಣೆ ಮತ್ತು ಕಾನೂನು ಪಾಲನೆ ಮಾಡುವುದಕ್ಕೆ ಎಂಬುದನ್ನು ಎಲ್ಲರೂ ಆರಿಯಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಕೆರಗೋಡು ಪೊಲೀಸ್ ಠಾಣೆ, ನೆಹರು ಯುವ ಕೇಂದ್ರದಿಂದ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ನಡೆದ ಸಂಚಾರ ನಿಯಮಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಸ್ತೆಗಳಲ್ಲಿ ವಾಹನಗಳ ತಪಾಸಣೆ ಮಾಡುವುದು ಪೊಲೀಸರ ಕರ್ತವ್ಯಗಳಲ್ಲಿ ಒಂದಾಗಿದೆ. ಇದನ್ನು ಸಾರ್ವಜನಿಕರು ತಪ್ಪಾಗಿ ಅರ್ಥೈಸುವುದು ಬೇಡ ಎಂದು ಸಲಹೆ ನೀಡಿದರು.
ಪೊಲೀಸರು ರಸ್ತೆಗಳಲ್ಲಿ ನಿಂತು ಬೆಳಗಿನಿಂದ ಸಂಜೆಯವರೆಗೂ ವಿವಿಧ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ದ್ವಿಚಕ್ರ ವಾಹನಗಳನ್ನು ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಾರೆ. ಇನ್ಷೂರೆನ್ಸ್ ಇರುವುದಿಲ್ಲ. ಇದರಿಂದ ಅಪಘಾತಕ್ಕೊಳಗಾಗಿ ಅನಾಹುತವಾದರೆ ಅಂತಹ ಕುಟುಂಬ ಬೀದಿ ಪಾಲಾಗುತ್ತದೆ. ಅದಕ್ಕಾಗಿ ಹೆಲ್ಮೆಟ್ ಧರಿಸುವುದಕ್ಕೆ ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.ಪೊಲೀಸರನ್ನು ದೂರುವುದು ಬಿಟ್ಟು ನಾವು ಸರಿಯಾಗಿ ಕಾನೂನು ಪಾಲನೆ ಮಾಡುತ್ತಿದ್ದೇವೆಯೇ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದು ಸುರಕ್ಷಿತವೇ, ಗೂಡ್ಸ್ ವಾಹನಗಳಲ್ಲಿ ಜನರನ್ನು ದನಗಳು ತುಂಬಿಕೊಂಡು ಹೋಗುವ ರೀತಿ ಸರಿಯೇ, ಸಂಚಾರಿ ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿಯಾಗಿ ಚಲಿಸುವುದು ಸರಿಯಾದ ಕ್ರಮವೇ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಇನ್ನಾದರೂ ಪೊಲೀಸರ ಮೇಲೆ ದೂರು ಹೇಳುವುದನ್ನು ಬಿಟ್ಟು ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ. ಇತರ ಜೀವಗಳಿಗೂ ತೊಂದರೆಯಾಗದಂತೆ ವಾಹನ ಚಲಾಯಿಸುವಂತೆ ಸಲಹೆ ನೀಡಿದರು.ವಕೀಲ ಸಿದ್ದರಾಜು ಅವರು ರಸ್ತೆ ಸುರಕ್ಷತಾ ಸಪ್ತಾಹ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಮಿಮ್ಸ್ ಆಸ್ಪತ್ರೆ ಮೂಳೆ ಮತ್ತು ಕೀಲು ವಿಭಾಗದ ವೈದ್ಯ ಡಾ.ಮೋಹನ್ ಅವರು ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳಿಗೆ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.
ಅಪರ ಪೊಲೀಸ್ ಅಧೀಕ್ಷಕ ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ರಮೇಶ್, ಕೆರಗೋಡು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಕೆರಗೋಡು ವೃತ್ತ ನಿರೀಕ್ಷಕ ಮಹೇಶ್, ಪಿಎಸ್‌ಐ ದೀಕ್ಷಿತ್ ಇತರರಿದ್ದರು.