ಕನ್ನಡಪ್ರಭವಾರ್ತೆ ಮಡಿಕೇರಿ

ಲವ್ ಜಿಹಾದ್ ಮತ್ತು ಟಿಸಿಎಸ್ ಕಂಪೆನಿಯಲ್ಲಿ ನಡೆದ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ಘಟನೆ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದೂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ವಿಶ್ವ ಹಿಂದು ಪರಿಷದ್ ಯುವ ಘಟಕ ಬಜರಂಗದಳದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ, ಪೊಲೀಸ್ ಇಲಾಖೆಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.ಬಜರಂಗದಳ ಸಂಯೋಜಕ ವಿನಯ್ ಕುಮಾರ್ ಮಾತನಾಡಿ, ಜಿಹಾದ್ ಮತ್ತು ಭಯೋತ್ಪಾದನೆ ಇಂದು ಇಡೀ ವಿಶ್ವಕ್ಕೆ ಹಬ್ಬಿದೆ. ಜಿಹಾದ್ ಸಿದ್ಧಾಂತದ ಮೂಲಕ ಇಡೀ ವಿಶ್ವವನ್ನೇ ಇಸ್ಲಾಮೀಕರಣ ಮಾಡುವ ವ್ಯವಸ್ಥಿತ ಷಡ್ಯಂತ್ರದ ಮುಂದುವರೆದ ಭಾಗವೇ ಮಹಾರಾಷ್ಟ್ರದ ನಾಸಿಕ್‌ನಲ್ಲಿ ವರದಿಯಾದ ಕಾರ್ಪೋರೇಟ್ ಜಿಹಾದ್ ಆಗಿದೆ. ಜತೆಗೆ ರಾಜ್ಯದ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್, ಜಿಮ್‌ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದೆ. ಇವು ಪ್ರತ್ಯೇಕ ಅಪರಾಧಗಳಲ್ಲ. ಒಂದೇ ಕೇಂದ್ರದಿಂದ ನಿರ್ದೇಶಿಸಲ್ಪಡುವ ವಿದೇಶಿ ಹಣಕಾಸಿನ ನೆರವಿನಿಂದ ನಡೆಯುವ ದೊಡ್ಡಜಾಲದ ಭಾಗವಾಗಿದೆ. ಆದ್ದರಿಂದ ಹಿಂದೂ ಹೆಣ್ಣು ಮಕ್ಕಳು ಎಚ್ಚರಿಕೆಯಿಂದಿರಬೇಕು ಎಂದರು.

ಜಿಲ್ಲೆಯಲ್ಲಿ ನಡೆಯುವ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀಸರಲ್ಲಿ ಮಾಹಿತಿಯೇ ಇರುವುದಿಲ್ಲ. ಹಿಂದೂ ಸಂಘಟನೆಗಳಿಂದ ದೂರು ನೀಡಿದ ನಂತರ ಎಚ್ಚೆತ್ತುಕೊಳ್ಳುತ್ತಾರೆ ಎಂದು ದೂರಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಶಾಲಪ್ಪ ಮಾತನಾಡಿ, ಒಂದು ವರ್ಗವನ್ನು ಎತ್ತಿಕಟ್ಟುವ ಕೆಲಸವನ್ನು ಇಂದಿನ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.ಹಿಂದೂಗಳು ಒಗ್ಗಟ್ಟಾಗದಿದ್ದಲ್ಲಿ ಹಿಂದುಗಳೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಮ್ಮ ರಕ್ಷಣೆಯನ್ನು ನಾವೇ ಮಾಡುವ ಮೂಲಕ ಹಿಂದು ಸಮಾಜವನ್ನು ಕಟ್ಟಬೇಕಾಗಿದೆ ಎಂದ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸುಮ್ಮನಿರುವ ಸಮಾಜ ಹಿಂದು ಸಮಾಜವಲ್ಲ ಎಂದರು.ಲವ್ ಜಿಹಾದ್ ಮತ್ತು ಟಿಸಿಎಸ್ ಕಂಪೆನಿಯಲ್ಲಿ ನಡೆದ ಕಾರ್ಪೋರೇಟ್ ಜಿಹಾದ್ ಹಾಗೂ ಮತಾಂತರದ ಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ವಿಹಿಂಪ ಜಿಲ್ಲಾ ಅಧ್ಯಕ್ಷ ರಮೇಶ್ ಪುದಿಯೊಕ್ಕಡ, ಕಾರ್ಯದರ್ಶಿ ಸಂತೋಷ್, ಪ್ರಮುಖರಾದ ಚೇತನ್ ಶಾಂತಿನಿಕೇತನ, ಬಜರಂಗದಳ ಸಹ ಸಂಯೋಜಕ ದುರ್ಗೇಶ್ ಭಜರಂಗಿ, ಮುಕುಂದ್, ನಗರ ಸಂಯೋಜಕ ಚರಣ್ ಕುಮಾರ್ ಸೇರಿದಂತೆ ಹಿಂದೂ ಪರ ಸಂಘಟನೆ ಹಾಗೂ ಭಾಜಪಾ ಕಾರ್ಯಕರ್ತರು ಪಾಲ್ಗೊಂಡಿದ್ದರು.