ಅಕ್ರಮ ಕಸಾಯಿಖಾನೆ ವಿರುದ್ಧ ವಿಎಚ್‌ಪಿ ಬಜರಂಗದಳ ನೇರ ಕಾರ್ಯಾಚರಣೆ ಎಚ್ಚರಿಕೆ

| Published : Jan 07 2025, 12:30 AM IST

ಅಕ್ರಮ ಕಸಾಯಿಖಾನೆ ವಿರುದ್ಧ ವಿಎಚ್‌ಪಿ ಬಜರಂಗದಳ ನೇರ ಕಾರ್ಯಾಚರಣೆ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿ ಮೃತ್ಯುಂಜಯ ನದಿಗೆ ಇತ್ತೀಚೆಗೆ ಗೋಮಾಂಸ ತ್ಯಾಜ್ಯ ಹಾಕಿ ನದಿಯನ್ನು ಅಪವಿತ್ರಗೊಳಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಕ್ಕಿಂಜೆಯಲ್ಲಿ ಸೋಮವಾರ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಬೃಹತ್ ಪ್ರತಿಭಟನೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅಕ್ರಮ ಕಸಾಯಿಖಾನೆಗಳನ್ನು ನಿಲ್ಲಿಸದಿದ್ದರೆ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ನೇರ ಕಾರ್ಯಾಚರಣೆಗೆ ಇಳಿಯಲಿದೆ. ಇದಕ್ಕೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ ಎಂದು ಬಜರಂಗದಳ ಮಂಗಳೂರು ವಿಭಾಗದ ಸಂಯೋಜಕ ಪುನೀತ್ ಅತ್ತಾವರ ಎಚ್ಚರಿಸಿದ್ದಾರೆ.

ತಾಲೂಕಿನ ಚಾರ್ಮಾಡಿ ಬಳಿ ಮೃತ್ಯುಂಜಯ ನದಿಗೆ ಇತ್ತೀಚೆಗೆ ಗೋಮಾಂಸ ತ್ಯಾಜ್ಯ ಹಾಕಿ ನದಿಯನ್ನು ಅಪವಿತ್ರಗೊಳಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಕ್ಕಿಂಜೆಯಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನೂರಾರು ಅಕ್ರಮ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದರು ಪೊಲೀಸ್ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿದ್ಯಮಾನಗಳನ್ನು ಎಂದಿಗೂ ಸಹಿಸುವುದಿಲ್ಲ. ಗೋವುಗಳ ರಕ್ಷಣೆಗೆ ಹಿಂದೂ ಸಮಾಜ ಯಾವ ತ್ಯಾಗಕ್ಕೂ ಸಿದ್ಧವಿದೆ ಎಂದರು. ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅಧಿವೇಶನದಲ್ಲಿ ಆನೆಗಳ ಕುರಿತು ಮಾತನಾಡಿದಾಗ ಮಾನವೀಯತೆ ಬಗ್ಗೆ ತಿಳಿಸಿದ ವಿಧಾನಸಭೆ ಸ್ಪೀಕರ್ ಯು‌.ಟಿ. ಖಾದರ್ ಗೋವುಗಳಿಗೂ ಬಾಳುವ ಹಕ್ಕಿದೆ ಎಂಬುದನ್ನು ಅವರು ತಿಳಿಯಬೇಕಿದೆ ಎಂದರು.

ವಿ.ಹಿಂ.ಪ .ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಚಾರ್ಮಾಡಿ ಪ್ರಕರಣದಲ್ಲಿ 5ಕ್ಕಿಂತ ಅಧಿಕ ಮಂದಿ ಭಾಗಿಯಾಗಿ ಇಬ್ಬರನ್ನು ಮಾತ್ರ ಪೊಲೀಸ್ ಇಲಾಖೆ ಬಂಧಿಸಿದೆ. ಉಳಿದವರನ್ನು ತಕ್ಷಣ ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊಳ್ಳಬೇಕು ಎಂದರು.

ವಿಹಿಂಪ ಭಜರಂಗದಳ ತಾಲೂಕು ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ತಾಲೂಕು ಸಂಯೋಜಕ ಸಂತೋಷ್ ಅತ್ತಾಜೆ, ಗೋ ರಕ್ಷಕ ರಮೇಶ ಧರ್ಮಸ್ಥಳ ಇದ್ದರು.

ಬೆಳ್ತಂಗಡಿ ಪ್ರಖಂಡದ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಖಿಲ್ ರೆಖ್ಯ ಸ್ವಾಗತಿಸಿದರು.

ಪ್ರತಿಭಟನಾಕಾರರು ಚಾರ್ಮಾಡಿ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿದರು.

...........................ಭಾವನೆಗಳಿಗೆ ಘಾಸಿ ಮಾಡಬಾರದು: ಪೂಂಜ

ಶಾಸಕ ಹರೀಶ್ ಪೂಂಜ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ ಸಮಾಜದ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೋಹತ್ಯೆ ನಿಷೇಧ ಕಾಯಿದೆಯಲ್ಲಿರುವ ಕಾನೂನುಗಳನ್ನು ಜಾರಿಗೆ ತರಬೇಕು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆ, ಗೋ ಹತ್ಯೆ ಮೂಲಕ ಹಿಂದೂ ಸಮಾಜದ ಭಾವನೆಗಳಿಗೆ ಘಾಸಿ ಉಂಟುಮಾಡುವ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ವಿಧಾನಸಭಾಧ್ಯಕ್ಷರು ಗೋವುಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರಿಯುವ ಅಗತ್ಯವಿದೆ ಎಂದರು.