ಸಾರಾಂಶ
ಅಮಿತ್ ಶಾ ಹೇಳಿಕೆ ಖಂಡಿಸಿ ಹೋರಾಟ । ಜಿಲ್ಲಾ ಕೇಂದ್ರ ಕೊಪ್ಪಳ ನಗರ ಸ್ತಬ್ಧ । ಪ್ರಯಾಣಿಕರ ಪರದಾಟ । ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ, ವಿವಿಧ ದಲಿತ ಸಂಘಟನೆಗಳು, ರೈತ, ಪ್ರಗತಿಪರ ಸಂಘಟನೆಗಳು, ವಿವಿಧ ಸಮುದಾಯಗಳ ಸಂಘಟನೆ ಕರೆ ನೀಡಿದ್ದ ಜಿಲ್ಲಾ ಕೇಂದ್ರ ಕೊಪ್ಪಳ ಬಂದ್ ಬಹುತೇಕ ಯಶಸ್ವಿಯಾಗಿದೆ.ಬೆಳಗ್ಗೆಯಿಂದ ಅಂಗಡಿ, ಮುಂಗಟ್ಟುಗಳು ಬಂದಾಗಿದ್ದು, ಸಂಚಾರಕ್ಕೂ ಸಹ ಬ್ರೇಕ್ ಬಿದ್ದಿತ್ತು. ಹೀಗಾಗಿ, ಪ್ರಯಾಣಿಕರು ಪರದಾಡುವಂತೆ ಆಯಿತು.
ನಗರದಲ್ಲಿರುವ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಬಂದ್ ಆಗಿದ್ದವು. ಖಾಸಗಿ ಶಾಲೆಗಳ ಬಹುತೇಕ ಆಡಳಿತ ಮಂಡಳಿಗಳು ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳಿಗೆ ಸಮಸ್ಯೆಯಾಗಲಿಲ್ಲ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡದೆ ಇರುವುದರಿಂದ ಶಾಲೆ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು ಪರದಾಡುವಂತೆ ಆಯಿತು.ಬೆಳಗ್ಗೆ ಸಾರಿಗೆ ಬಸ್ಸುಗಳು ಸಂಚರಿಸಿದವಾದರೂ 9 ಗಂಟೆಯ ವೇಳೆಗೆ ಅವುಗಳನ್ನು ಸಹ ಬಂದ್ ಮಾಡಲಾಯಿತು.
ಹೋಟೆಲ್, ಖಾನಾವಳಿಯೂ ಇರದೆ ಇರುವುದರಿಂದ ಪ್ರಯಾಣಿಕರು ಬಸ್ಸು ಇಲ್ಲದೆ, ತಿನ್ನಲು ಏನು ಸಿಗದೆ ಪರದಾಡಿದರು.ಬಂದ್ ಕರೆ ಹಿನ್ನೆಲೆ ಸಂಚಾರ ಸ್ತಬ್ಧವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಬೈಕ್ ಸವಾರರು ಹರಸಾಹಸ ಮಾಡಿ, ಹೋಗುತ್ತಿರುವುದು ಕಂಡು ಬಂದಿತು.
ವಾಗ್ವಾದ:ಬೈಕ್ ಸವಾರರು ಇಲ್ಲದ ಕಾರಣ ಹೇಳಿ ಮುಂದೆ ಹೋಗಲು ಮುಂದಾದಾಗ ಅಲ್ಲಲ್ಲಿ ಗಲಾಟೆಗಳು ಆಗಿರುವುದು ಕಂಡು ಬಂತು. ಕೆಲವರು ಆಟೋ ಸಹ ಓಡಿಸಲು ಮುಂದಾಗಿದ್ದರಿಂದ ವಾಗ್ವಾದ, ಸಣ್ಣಪುಟ್ಟ ಗಲಾಟೆಗಳು ಸಹ ಆದವು. ಆದರೆ, ನೇತೃತ್ವ ವಹಿಸಿದ್ದ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.ದಿಢೀರ್ ಧರಣಿ:
ಪ್ರತಿಭಟನಾ ನಿರತರನ್ನು ನಿಯಂತ್ರಣ ಮಾಡಲು ಮುಂದಾದಾಗ ಕೇಂದ್ರೀಯ ಬಸ್ ನಿಲ್ದಾಣ ಎದುರು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯಾಯಿತು. ಇದನ್ನು ವಿರೋಧಿಸಿ ಬಸ್ ನಿಲ್ದಾಣದ ಎದುರೇ ಧರಣಿ ನಡೆಸಿ, ಟೈಯರ್‌ಗೆ ಬೆಂಕಿ ಹೆಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಯಶಸ್ವಿ:ದಲಿತ ಸಂಘಟನೆಗಳು ಕರೆ ನೀಡಿದ್ದ ಕೊಪ್ಪಳ ಬಂದ್ ಹತ್ತು ವರ್ಷಗಳ ನಂತರ ಸಂಪೂರ್ಣ ಯಶಸ್ವಿಯಾಗಿದೆ. ಇತ್ತೀಚೆಗೆ ನಡೆದ ಬಂದ್ ಗಳ ಪೈಕಿ ಬಹುತೇಕ ಇದು ಯಶಸ್ವಿಯಾಗಿರುವ ಬಂದ್ ಎಂದು ಸಹ ವಿಶ್ಲೇಷಣೆ ಮಾಡುತ್ತಿರುವುದು ಕಂಡು ಬಂದಿತು.ಬೆಂಬಲಿಸಿದ ಸಂಘಟನೆಗಳು: ಮಾದಿಗ, ಚಲವಾದಿ, ಮುಸ್ಲಿಮ್, ಕ್ರಿಶ್ಚಿಯನ್, ಮ್ಯಾದರ್, ಲಂಬಾಣಿ, ಲಿಂಗಾಯತ, ಹಾಲುಮತ, ವಾಲ್ಮೀಕಿ, ಭೋವಿ, ಭಜಂತ್ರಿ, ಮಡಿವಾಳ, ಶ್ರೀ ಗುರುಬಸವ, ಮೋಚಿ, ಹಡಪದ, ಪಂಚಮಸಾಲಿ, ಸುಡುಗಾಡು ಸಿದ್ದರ, ಚನ್ನ ದಾಸರ, ಶಿಳ್ಳೆಕ್ಯಾತರ, ಕುರುಬ, ಹಡಪದ ಅಪ್ಪಣ್ಣ ಯುವಕರು ಸಂಘ, ದಲಿತ ಸಂಘಟನೆಗಳು, ಅಲ್ಪಸಂಖ್ಯಾತರ ಹಿಂದುಳಿದ ವರ್ಗದವರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಮಹಿಳಾ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆಗಳ ಬಣಗಳು, ಮಾನವ ಹಕ್ಕುಗಳ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಜಿಲ್ಲಾ ವಕೀಲರ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ, ಗ್ರಾಮ ಘಟಕಗಳು, ನೌಕರರ ಸಂಘ, ಮುಸ್ಲಿಮ್ ಪಂಚ್ ಕಮಿಟಿಗಳು, ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್, ಕಾರ್ ಟ್ಯಾಕ್ಸಿಗಳ ಸಂಘಟನೆ, ಆಟೋ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳ ಸಂಘ, ಬ್ಯಾಂಕ್ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘ, ವರ್ತಕರ ಸಂಘ, ಬಂಗಾರದ ಅಂಗಡಿಗಳ ಸಂಘ, ಬಟ್ಟೆ ವ್ಯಾಪಾರಿಗಳ ಅಂಗಡಿಗಳೂ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಹೋರಟಕ್ಕೆ ಸಂಪೂರ್ಣ ಬೆಂಬಲ ನೀಡಿದವು. ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರಾದ ಅಲ್ಲಮ ಪ್ರಭು ಬೆಟ್ಟದೂರು, ಬಸವರಾಜ ಸೂಳಿಬಾವಿ, ಹನುಮೇಶ ಕಡೇಮನಿ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಪ್ರಮುಖರಾದ ಜ್ಯೋತಿ ಗೊಂಡಬಾಳ, ರಾಮಣ್ಣ ಚೌಡಕಿ, ಮಂಜುನಾಥ್ ಗೊಂಡಬಾಳ, ಪರಶುರಾಮ್ ಕೆರೆಹಳ್ಳಿ, ಕೌಸರ್ ಕೋಲ್ಕಾರ್, ಕೆ.ಬಿ. ಗೋನಾಳ್, ಬಸವರಾಜ್ ಪೂಜಾರ್, ಸಲೀಮ್ ಖಾದ್ರಿ, ಆದಿಲ್ ಪಟೇಲ್, ರಮೇಶ್ ಗಿಣಿಗೇರಿ, ಕಾಶಪ್ಪ ಚಲವಾದಿ ಇದ್ದರು.ಅಂಬೇಡ್ಕರ್ ತಂಟೆಗೆ ಬಂದರೆ ರಕ್ತಪಾತ:
ಅಂಬೇಡ್ಕರ್ ಅವರೇ ನಮ್ಮ ಪಾಲಿನ ದೇವರು. ಅಂಥ ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿದರೆ, ಅಪಮಾನ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾ ಮಾಡಬೇಕು. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಬಳಿ ನಡೆದ ಸಭೆಯಲ್ಲಿ ಮುಖಂಡರಾದ ಬಸವರಾಜ ಸೂಳಿಬಾವಿ, ಅಲ್ಲಮಪ್ರಭು ಬೆಟ್ಟದೂರು, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಹಲವರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.