ಸಾರಾಂಶ
ಹುಬ್ಬಳ್ಳಿ: ಸಾರಿಗೆ ನೌಕರರ ಅನಿರೀಕ್ಷಿತ ನಿಧನದಿಂದ ಅವರ ಅವಲಂಬಿತ ಕುಟುಂಬಸ್ಥರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದೆಂಬ ಸದುದ್ದೇಶದಿಂದ ಸಂಸ್ಥೆಯು ಎಸ್‌ಬಿಐ ಬ್ಯಾಂಕ್‌ನಿಂದ ₹1 ಕೋಟಿ ಅಪಘಾತ ಪರಿಹಾರ ವಿಮೆ ಜಾರಿಗೊಳಿಸಿದೆ ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.
ನಗರದ ನಗರ ಸಾರಿಗೆ ಘಟಕದಲ್ಲಿ ಸೋಮವಾರ ನೇತ್ರ ತಪಾಸಣೆ ಯೋಜನೆ ಹಾಗೂ ಎಸ್‌ಬಿಐನ ₹1 ಕೋಟಿ ಅಪಘಾತ ವಿಮೆ ಜಾರಿಯ "ಸಾರಿಗೆ ಆಶಾಕಿರಣ " ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯಲ್ಲಿ ಹೆಚ್ಚು ಶ್ರಮಪಡುವ ನೌಕರರ ಕುಟುಂಬಗಳು ಅವರ ಅನಿರೀಕ್ಷಿತ ನಿಧನದಿಂದ ತೊಂದರೆ ಅನುಭವಿಸಬಾರದು. ಈ ನಿಟ್ಟಿನಲ್ಲಿ ₹1 ಕೋಟಿ ವಿಮೆ ಜಾರಿ ಮಾಡಲಾಗಿದೆ. ಆ ಮೂಲಕ ನೌಕರಸ್ಥರ ಕುಟುಂಬವನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಯೋಜಿಸಲಾಗಿದೆ ಎಂದರು.
ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ದೇಶದಲ್ಲಿ 6 ಕೋಟಿ ಜನ ಅನಗತ್ಯ ಅಂಧತ್ವದಿಂದ ಬಳಲುತ್ತಿದ್ದಾರೆ. ಸಾರಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತ ತಪ್ಪಿಸಲು ನೇತ್ರ ತಪಾಸಣೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನೌಕರರಿಗೆ ಮತ್ತು ಅವರ ಅವಲಂಬಿತರಿಗೆ ನೇತ್ರ ತಪಾಸಣಾ ಸೌಲಭ್ಯ ಒದಗಿಸಿದೆ. ಜತೆಗೆ ನೌಕರರಿಗೆ ಉಚಿತ ಕನ್ನಡಕ ಸಹ ವಿತರಿಸಲಾಗುತ್ತಿದ್ದು, ನೌಕರರು ಇದರ ಸದುಪಯೋಗ ಪಡೆಯಬೇಕು ಎಂದರು.
ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಮಾತನಾಡಿ, ಸಂಸ್ಥೆಯು ನೌಕರರ ಅನುಕೂಲಕ್ಕಾಗಿ ಹಲವು ಯೋಜನೆ ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ ಅಪಘಾತ ವಿಮೆ, ವಾಯವ್ಯ ಸ್ನೇಹಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಸಿಬ್ಬಂದಿ ದೂರುಗಳಿಗೆ ಸ್ಪಂದಿಸಲಾಗುತ್ತಿದ್ದು, ಇವುಗಳ ಲಾಭ ಪಡೆಯಬೇಕು ಎಂದು ಹೇಳಿದರು.
ಎಸ್‌ಬಿಐ ಬ್ಯಾಂಕ್‌ನ ರಿಜಿನಲ್ ಮ್ಯಾನೇಜರ್ ಡಾ. ಮೋಹನ ಪಾಟೀಲ, ಡಾ. ನಿರಂಜನ ಜೋಶಿ, ಅಪರ್ಣಾ, ಇಲಾಖೆ ಮುಖ್ಯಸ್ಥೆ ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಬಿ. ಬೋರಯ್ಯ, ಜಗದಂಬಾ ಕೋಪರ್ಡೆ, ಜಿ. ಶ್ರೀನಾಥ, ಎಂ.ಬಿ. ಕಪಲಿ, ರವಿ ಅಂಚಿಗಾವಿ, ಪಿ.ಆರ್. ಕಿರಣಗಿ, ಶಿವಾನಂದ ನಾಗಾವಿ, ವಿಭಾಗೀಯ ನಿಯಂತ್ರಣಾಕಾರಿಗಳಾದ ಎಂ. ಸಿದ್ಧಲಿಂಗೇಶ, ಎಚ್. ರಾಮನಗೌಡರ, ಕಾರ್ಮಿಕ ಮುಖಂಡ ಆರ್.ಎಫ್. ಕವಳಿಕಾಯಿ, ಗಂಗಾಧರ ಕಮಲದಿನ್ನಿ ಸೇರಿದಂತೆ ಹಲವರಿದ್ದರು.