ಬಿಸಿಯೂಟ ನೌಕರರಿಂದ ವಿಜಯೋತ್ಸವ

| Published : Jul 18 2024, 01:31 AM IST

ಬಿಸಿಯೂಟ ನೌಕರರಿಂದ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ದಾಸೋಹ ಬಿಸಿಯೂಟ ತಯಾರಿಸುವ ನೌಕರರು ನಿವೃತ್ತಿಯಾದರೆ ಬರಿ ಕೈಯಲ್ಲೆ ಮನೆಗೆ ಹೋಗಬೇಕಾಗಿತ್ತು. ಅವರಿಗೆ ಇಡಿಗಂಟು ಕೊಡಬೇಕೆಂದು ನಾಲ್ಕೈದು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದ ಹೋರಾಟಕ್ಕೆ ಫಲ ಇಂದು ಫಲಿಸಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಸರ್ಕಾರವು ನಿವೃತ್ತಿ ಹೊಂದಿದ ಬಿಸಿಯೂಟ ನೌಕರರಿಗೆ ಇಡುಗಂಟು ಘೋಷಣೆ ಮಾಡಿರುವುದನ್ನು ಸಿಐಟಿಯು ಮೇತೃತ್ವದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಸಮಿತಿಯು ಸ್ವಾಗತಿಸಿದ್ದು, ಬುಧವಾರ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹೂ ಮಳೆ ಸುರಿಸಿ, ಸರ್ಕಾರಕ್ಕೆ ಜಯಕಾರ ಹಾಕಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿತು.ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಂಜುಳ, ಅಕ್ಷರ ದಾಸೋಹ ಬಿಸಿಯೂಟ ತಯಾರಿಸುವ ನೌಕರರು ನಿವೃತ್ತಿಯಾದರೆ ಬರಿ ಕೈಯಲ್ಲೆ ಮನೆಗೆ ಹೋಗಬೇಕಾಗಿತ್ತು. ಅವರಿಗೆ ಇಡಿಗಂಟು ಕೊಡಬೇಕೆಂದು ನಾಲ್ಕೈದು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದ ಹೋರಾಟಕ್ಕೆ ಫಲ ಇಂದು ಫಲಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿವೃತ್ತರಾದಾಗ ಆಸರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಡಿಗಂಟು ನೀಡಲು ಒಪ್ಪಿಕೊಂಡು ಆದೇಶ ಮಾಡಿದ್ದಾರೆ. ರಾಜ್ಯದಲ್ಲಿ 1.21 ಲಕ್ಷ ಮಂದಿ ಬಿಸಿಯೂಟ ನೌಕರರಿದ್ದು, 2021 ರಲ್ಲಿ 10,500 ನೌಕರರು ನಿವೃತ್ತಿಯಾಗಿದ್ದಾರೆ. 20 ವರ್ಷ ಸೇವೆ ಸಲ್ಲಿಸಿದವರಿಗೆ 40 ಸಾವಿರ, 15 ವರ್ಷ ಸೇವೆ ಸಲ್ಲಿಸಿದವರಿಗೆ 30 ಸಾವಿರ ರು.ಗಳನ್ನು ನಿವೃತ್ತಿಯಾದಾಗ ಇಡಿಗಂಟು ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಸಲಹೆಗಾರ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿ, ಕಾಂಗ್ರೇಸ್ ಸರ್ಕಾರ ಎಲ್ಲ ನಿವೃತ್ತ ನೌಕರರಿಗೆ ಇಡುಗಂಟು ನೀಡಲು ಒಪ್ಪಿ ಸೂಚಿಸಿ ಆದೇಶವೂ ಮಾಡಿಕೊಟ್ಟಿದ್ದಾರೆ. ಇದೊಂದು ಐತಿಹಾಸಿಕ ಹೋರಾಟವಾಗಿದ್ದು ಇಡೀ ದೇಶದಲ್ಲಿಯೆ ಮೊಟ್ಟ ಮೊದಲಬಾರಿಗೆ ಕರ್ನಾಟದಲ್ಲಿ ಮಾತ್ರ ಅಕ್ಷರ ದಾಸೋಹ ನೌಕರರಿಗೆ ನಿವೃತ್ತಿ ಇಡಿಗಂಟು ಸಿಗುತ್ತಿರುವ ರಾಜ್ಯವೆನಿಸಿಕೊಂಡಿದೆ ಎಂದರು.

ಈ ವೇಳೆ ಗೌರಿಬಿದನೂರು ತಾಲೂಕು ಅಧ್ಯಕ್ಷೆ ರಾಜಮ್ಮ, ನರಸಮ್ಮ, ಮುನಿಲಕ್ಷ್ಮಮ್ಮ, ಭಾರತೀ, ಲಲಿತಾ, ಅಮರಾವತಿ, ಮತ್ತಿತರರು ಇದ್ದರು