ಸಾರಾಂಶ
ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಮೊಹರಂ ಹಬ್ಬವನ್ನು ಕಲಬುರಗಿಯಲ್ಲಿ ಶಿಯಾ ಮುಸ್ಲಿಂ ಸಮುದಾದವರು ರ್‍ಯಾಲಿ ನಡೆಸಿ, ಮೈಗೆ ಚೂಪಾದ ವಸ್ತುಗಳಿಂದ ಸ್ವಯಂ ಚುಚ್ಚಿಕೊಂಡು ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಅವರು ಹುತಾತ್ಮರಾದ ಪ್ರಸಂಗವನ್ನು ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಮೊಹರಂ ಹಬ್ಬವನ್ನು ಕಲಬುರಗಿಯಲ್ಲಿ ಶಿಯಾ ಮುಸ್ಲಿಂ ಸಮುದಾದವರು ರ್‍ಯಾಲಿ ನಡೆಸಿ, ಮೈಗೆ ಚೂಪಾದ ವಸ್ತುಗಳಿಂದ ಸ್ವಯಂ ಚುಚ್ಚಿಕೊಂಡು ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಅವರು ಹುತಾತ್ಮರಾದ ಪ್ರಸಂಗವನ್ನು ಸ್ಮರಿಸಿದರು.ಮೋಹರಮ್ ಹಬ್ಬದ ಈ ದಿನ ಮುಸ್ಲಿಂ ಸಮುದಾಯದನವರು ಪ್ರವಾದಿ ಮೊಹಮ್ಮದ್ ರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಅವರ ಮರಣವನ್ನು ಸ್ಮರಿಸಲಾಗುತ್ತದೆ. ಮೊಹರಂ ಹಬ್ಬವು ಸಂತೋಷದಿಂದ ಆಚರಿಸುವ ಹಬ್ಬವಾಗದೆ ಬಲಿದಾನ ಸ್ಮರಣೆಯ ಹಾಗೂ ದುಃಖವನ್ನು ಹೊರಹಾಕುವ ಹಬ್ಬವಾಗಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ 61 ನೇ ವರ್ಷದಲ್ಲಿ 10ನೇ ಮೊಹರಂ (ಅಶುರಾ ದಿನ) ಕರ್ಬಲಾ ಯುದ್ಧ ನಡೆದು, ಪ್ರವಾದಿಯ ಪ್ರೀತಿಯ ಮೊಮ್ಮಗ ಇಮಾಮ್ ಹುಸೇನ್‌ರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು.ಕಲಬುರಗಿಯಲ್ಲಿ ಮೋಹರಮ್ ಕೊನೆಯ ದಿನವಾದ ಬುಧವಾರ ಶಿಯಾ ಮುಸ್ಲೀಂ ಸಮುದಾಯದವರು ತಾರಫೈಲ್‌ನಲ್ಲಿರುವ ಅಲ್ಲಾಖಾನಾ ಝಹೀರಾ ಇರಾನಿ ಮಸೀದಿಯಿಂದ ರ್‍ಯಾಲಿ ನಡೆಸಿ ರೇಲ್ವೆ ನಿಲ್ದಾಣದ ಮಾರ್ಗವಾಗಿ ಸರ್ದಾರ್ ಪಟೇಲ್ ವೃತ್ತದವರೆಗೂ ಬಂದು ಅಲ್ಲಿ ಹುಸೇನ್ ಅವರ ಸಾವಿನ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದರಲ್ಲದೆ, ಅವರ ತ್ಯಾಗವನ್ನು ನೆನಪಿಸಿಕೊಂಡರು.
ರ್‍ಯಾಲಿಯಲ್ಲಿದ್ದ ಯುವಕರು ಅನೇಕರು ಎದೆಗೆ ಹೊಡೆದುಕೊಳ್ಳುವುದು, ಹಣೆಯನ್ನು ಬಡಿದುಕೊಳ್ಳುವುದು ಮತ್ತು ಚೂಪಾದ ವಸ್ತುಗಳನ್ನು ಬಳಸಿ ಸ್ವಯಂ ಚುಚ್ಚಿಕೊಂಡು ರಕ್ತಸಿಕ್ತರಾದ ನೋಟಗಳು ಕಂಡವು. ಹರಿತವಾದ ಚಾಕುಗಳನ್ನು ಕೆಲವರು ಬಳಸಿ ಮೈಗೆ ಚುಚ್ಚಿಕೊಂಡ ನೋಟಗಳು ಕಂಡವು.