ಮರಳು ಮಾಫಿಯಾಕ್ಕೆ ಗ್ರಾಮ ಸಹಾಯಕ ಬಲಿ?

| Published : Aug 17 2025, 02:29 AM IST

ಸಾರಾಂಶ

ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಹುಲ್ಲೂರು ಗ್ರಾಮದ ಹತ್ತಿರ ನಡೆದ ಅಪಘಾತದಲ್ಲಿ ಗ್ರಾಮ ಸಹಾಯಕ ಮಹ್ಮದ್ ರಫೀಕ್ ಹುಸೇನಸಾಬ ನದಾಫ್ (27) ಎಂಬ ಯುವಕ ಅಸುನೀಗಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಲಕ್ಷ್ಮೇಶ್ವರ: ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಹುಲ್ಲೂರು ಗ್ರಾಮದ ಹತ್ತಿರ ನಡೆದ ಅಪಘಾತದಲ್ಲಿ ಗ್ರಾಮ ಸಹಾಯಕ ಮಹ್ಮದ್ ರಫೀಕ್ ಹುಸೇನಸಾಬ ನದಾಫ್ (27) ಎಂಬ ಯುವಕ ಅಸುನೀಗಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ರಫೀಕ್ ಮೃತಪಟ್ಟ ಸುದ್ದಿ ತಿಳಿಯುತ್ತಲೆ ತಾಯಿ ಹಾಗೂ ತಂಗಿಯರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಳೆದ ಕೆಲ ವರ್ಷಗಳ ಹಿಂದೆ ರಫೀಕ್‌ನ ತಂದೆ ಕೂಡಾ ಮೃತಪಟ್ಟಿದ್ದರು. ರಫೀಕ್ ತಂದೆ ತಾಯಿಗೆ ಒಬ್ಬನೆ ಮಗ. ಈಗ ಈತನು ಕೂಡಾ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಆ ಕುಟುಂಬಕ್ಕೆ ದಿಕ್ಕು ಇಲ್ಲದಂತಾಗಿದೆ.

ಈ ಕುರಿತು ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಡೆದ್ದದ್ದೇ ರಫೀಕ್ ಸಾವಿಗೆ ಕಾರಣ: ತಾಲೂಕಿನ ಹುಲ್ಲೂರ ಗ್ರಾಮದ ಹತ್ತಿರ ಹರಿಯುತ್ತಿರುವ ದೊಡ್ಡ ಹಳ್ಳದಿಂದ ಪ್ರತಿನಿತ್ಯ ಹತ್ತಾರು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಮಹ್ಮದ್ ರಫೀಕ್ ಹುಲ್ಲೂರು ಗ್ರಾಮದಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಮೇಲಧಿಕಾರಿಗಳ ಸೂಚನೆ ಮೇರೆಗೆ ಅಕ್ರಮ ಮರಳು ತಡೆಯುವ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ವಾರದ ಹಿಂದೆ ಈಗ ಅಪಘಾತ ಪಡಿಸಿದ ಟ್ರ್ಯಾಕ್ಟರ್ ಚಾಲಕ ಮತ್ತು ರಫೀಕ್ ಮಧ್ಯೆ ವಾಗ್ವಾದ ನಡೆದಿತ್ತು ಎಂಬ ಬಗ್ಗೆ ಕೆಲವರು ನಮಗೆ ಮಾಹಿತಿ ನೀಡಿದ್ದರು ಎಂದು ರಫೀಕನ ತಾಯಿ ಜೈತುನಬಿ ನದಾಫ್‌ ಆರೋಪಿಸಿದ್ದಾರೆ. ಅಕ್ರಮ ಮರಳು ಸಾಗಾಟ ತಡೆಯಲು ಹೋದ ವೇಳೆ ಬೇಕೆಂದೇ ನಮ್ಮ ಮಗ ರಫೀಕ್‌ನ ಮೇಲೆ ಟ್ರ್ಯಾಕ್ಟರ್ ಹರಿಸಿ ಅಪಘಾತ ಪಡಿಸಿ ಕೊಲೆ ಮಾಡಲಾಗಿದೆ ಎಂದು ಜೈತುನಬಿ ನದಾಫ್ ಆರೋಪಿಸಿ ಕಣ್ಣೀರು ಸುರಿಸಿದ್ದಾರೆ.