ಧರ್ಮದ ಪ್ರತಿಷ್ಠಾಪನೆಗಾಗಿ ಜನ್ಮ ತಾಳಿದವನೆ ಶ್ರೀಕೃಷ್ಣ

| Published : Aug 17 2025, 02:29 AM IST

ಧರ್ಮದ ಪ್ರತಿಷ್ಠಾಪನೆಗಾಗಿ ಜನ್ಮ ತಾಳಿದವನೆ ಶ್ರೀಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮದ ಅವನತಿ ಕಾಲದಲ್ಲಿ ಪುನಃ ಧರ್ಮ ಸ್ಥಾಪನೆಗಾಗಿ ದೇವರೇ ಅವತಾರ ಪುರುಷನಾಗಿ ಆಗಮಿಸಿ ಧರ್ಮ ಸಂಸ್ಥಾಪನೆಗೆ ಮುಂದಾಗುತ್ತಾರೆ ಎಂಬುದಕ್ಕೆ ಶ್ರೀಕೃಷ್ಣ ಅವತಾರ ಒಂದಾಗಿದೆ

ಹೊಸಪೇಟೆ: ಭೂಮಿ ಮೇಲೆ ಅಧರ್ಮ ನಾಶ ಮತ್ತು ಧರ್ಮದ ಸ್ಥಾಪನೆಗಾಗಿ ಜನ್ಮ ತಾಳಿದವನೇ ಶ್ರೀಕೃಷ್ಣ ಪರಮಾತ್ಮ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,

ಧರ್ಮದ ಅವನತಿ ಕಾಲದಲ್ಲಿ ಪುನಃ ಧರ್ಮ ಸ್ಥಾಪನೆಗಾಗಿ ದೇವರೇ ಅವತಾರ ಪುರುಷನಾಗಿ ಆಗಮಿಸಿ ಧರ್ಮ ಸಂಸ್ಥಾಪನೆಗೆ ಮುಂದಾಗುತ್ತಾರೆ ಎಂಬುದಕ್ಕೆ ಶ್ರೀಕೃಷ್ಣ ಅವತಾರ ಒಂದಾಗಿದೆ. ಗಂಗೆ ಕೂಡ ಹೀಗೆ ಭೂಲೋಕದಲ್ಲಿ ಅವತರಿಸಿದವಳು ಜೀವಿಗಳನ್ನು ಉದ್ಧಾರ ಮಾಡುತ್ತಿರುವವಳು. ಇದೇ ರೀತಿ ಹಲವರು ದೇವತೆಗಳ ಅವತಾರ ನಡೆದಿದೆ, ನಡೆಯುತ್ತಲೂ ಇರುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಾಗಿದೆ. ಶ್ರೀಕೃಷ್ಣನನ್ನೇ ಪೂರ್ಣಾವತಾರಿ ಎಂದು ಕರೆಯುತ್ತೇವೆ. ನಮ್ಮ ಜೀವನದ ಎಲ್ಲ ಆಯಾಮಗಳಲ್ಲೂ ಸಾಧಿಸಬಲ್ಲವನ ವ್ಯಕ್ತಿತ್ವವೇ ಪೂರ್ಣ ವ್ಯಕ್ತಿತ್ವವಾಗಿದೆ. ಶ್ರೀಕೃಷ್ಣನಷ್ಟು ನಮ್ಮಲ್ಲಿ ಒಂದಾಗಿ ಬೆರೆಯಬಲ್ಲ ದೈವ ಇನ್ನೊಬ್ಬನಿಲ್ಲ. ಪ್ರತಿ ಕ್ಷಣವೂ ಮನುಷ್ಯನಾಗಲು ತವಕಿಸುವ ದೈವವೆಂದರೆ ಅದು ಶ್ರೀಕೃಷ್ಣನೇ ಹೌದು, ಶ್ರೀಕೃಷ್ಣ ತತ್ವಗಳು ಕೇವಲ ಜೀವನದ ಯಾವುದೋ ಒಂದು ಭಾಗಕ್ಕೆ ಮಾತ್ರ ಸೀಮೀತವಾಗಿಲ್ಲ. ಅದು ಸಮಗ್ರ ಜೀವನಕ್ಕೂ ಆದರ್ಶವಾಗಿದೆ ಎಂದರು.

ಹೊಸಪೇಟೆ ತಾಲೂಕು ಯಾದವ, ಗೊಲ್ಲರ ಸಂಘದ ಗೌರವಾಧ್ಯಕ್ಷ ಗೋಣಿ ಬಸಪ್ಪ ಮಾತನಾಡಿ, ಕೃಷ್ಣ ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ ತನ್ನ ಉಪದೇಶಕ್ಕೆ ತಾನೇ ಉದಾಹರಣೆಯಾದವನು. ಜೀವನದಲ್ಲಿ ಎಷ್ಟೆಲ್ಲ ಕಷ್ಟ, ಅವಮಾನಗಳನ್ನು ಎದುರಿಸಿದರೂ ಅವನು ತನ್ನ ಕರ್ತವ್ಯ ಪ್ರಜ್ಞೆಯಿಂದ ದೂರ ಸರಿದವನಲ್ಲ. ಅವನಷ್ಟು ಕಷ್ಟ ಅನುಭವಿಸಿದವರು ಬಹುಶಃ ಇತಿಹಾಸದಲ್ಲಿ ಇನ್ನೊಬ್ಬರು ಇರಲಾರರು. ಅವನು ಹುಟ್ಟುವುದಕ್ಕೂ ಮೊದಲೇ ಸಾವಿನ ಮಡಿಲಿನಲ್ಲಿ ಬಿದ್ದವನು. ಎಷ್ಟೆಲ್ಲ ಬಂಧುಗಳ, ಸ್ನೇಹಿತರ, ರಾಜ, ಮಹಾರಾಜರ ನಡುವೆ ಬದುಕಿದ್ದವನು ಕೊನೆಗೆ ಪ್ರಾಣವನ್ನು ತ್ಯಾಗ ಮಾಡುವಾಗ ಆತ್ಮೀಯರು ಯಾರೂ ಅವನ ಸಮೀಪದಲ್ಲಿ ಇರಲಿಲ್ಲ. ಈ ಹುಟ್ಟು, ಸಾವುಗಳ ನಡುವೆ ಅವನು ನೆಮ್ಮದಿಯಾಗಿದ್ದ ದಿನಗಳೇ ಕಡಿಮೆ. ನಿರಂತರವಾಗಿ ಒಂದಲ್ಲ ಒಂದು ಚಟುವಟಿಕೆಯಲ್ಲಿಯೇ ತೊಡಗಿಕೊಂಡಿದ್ದ. ಹೀಗಿದ್ದರೂ ತನ್ನ ವೈಯಕ್ತಿಕ ಸುಖ, ದುಃಖಗಳನ್ನು ಗಣನೆಗೆ ತೆಗೆದುಕೊಳ್ಳದೆ, ಕರ್ತವ್ಯ ಮೆರೆದವನು ಶ್ರೀಕೃಷ್ಣ. ದೈವತ್ವದ ಸ್ಥಿತಿಯನ್ನೂ, ಮನುಷತ್ವದ ಗತಿಯನ್ನೂ ಏಕಕಾಲದಲ್ಲಿ ಕಾಣಿಸಿದವನು. ಹೀಗಾಗಿ ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ದೇಶದಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬವನ್ನು ಶ್ರೀಕೃಷ್ಣ ಜನ್ಮ ದಿನವನ್ನಾಗಿ ಆಚರಿಸುವ ಹಬ್ಬವಾಗಿದೆ. ವಿಷ್ಣುವಿನ ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ದ, ಕಲ್ಕಿ ಅವತಾರಗಳು ಬಹಳ ಪ್ರಸಿದ್ಧವಾಗಿದ್ದು. ಕೃಷ್ಣನ ಅವತಾರ ಈ ಹತ್ತು ಅವತಾರಗಳಲ್ಲಿಯೇ ವಿಶಿಷ್ಟ ಸ್ಥಾನವನ್ನು ಪಡೆದಿದ್ದು ಶ್ರೀಕೃಷ್ಣನು ಪೂರ್ಣಾವತಾರಿ ಎಂದರು.

ಯಾದವ ಸಮಾಜದ ಮುಖಂಡರಾದ ಬಿ.ಈರಣ್ಣ, ಜಿ. ಶ್ರೀನಿವಾಸಲು, ವೈ.ಬಿ.ಮಧುಸೂಧನ್, ಮಾರುತಿ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.