ಸಾರಾಂಶ
ಶಿಗ್ಗಾಂವಿ: ಬಗರ್ ಹುಕುಂ ಮತ್ತು ಅರಣ್ಯ ಅವಲಂಬಿತ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಮಹಾಸಭಾ, ಅರಣ್ಯ ಹಕ್ಕು ಹೋರಾಟ ಸಮಿತಿಯಿಂದ ಪಾದಯಾತ್ರೆ, ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಪಟ್ಟಣದ ಚೆನ್ನಮ್ಮ ಸರ್ಕಲ್‌ನಿಂದ ಹಳೆ ಬಸ್ ಸ್ಟ್ಯಾಂಡ್, ಹೊಸ ಬಸ್ ಸ್ಟ್ಯಾಂಡ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ವರೆಗೆ ಪಾದಯಾತ್ರೆ ಸಾಗಿತು. ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ, ವಕೀಲರಾದ ರವಿಕಾಂತ ಅಂಗಡಿ ಮಾತನಾಡಿ, ನೀರಲಕಟ್ಟಿ, ಚಂದಾಪುರ, ಹುಣಸಿಕಟ್ಟಿ, ಶಿವಪುರ, ತಡಸ, ಅರಟಾಳ, ದುಂಡಸಿ, ಭದ್ರಾಪುರ, ಕೋಣನಕೇರಿ, ಮುಳಕೇರಿ, ಬಸನಕೊಪ್ಪ, ಮಡ್ಲಿ, ಹುಲಸೋಗಿ, ಹೊಸೂರ, ಯತ್ತಿನಹಳ್ಳಿ ಹಾಗೂ ತಾಲೂಕಿನ ವಿವಿಧ ಗ್ರಾಮದ, ತಾಂಡಾದ ನಿವಾಸಿಗಳಾದ ರೈತರು ತಲೆತಲಾಂತರದಿಂದ ತಮ್ಮ ಉಪಜೀವನಕ್ಕಾಗಿ ಜಮೀನುಗಳನ್ನು ಸಾಗುವಳಿ ಮಾಡುತ್ತಾ ಬಂದಿದ್ದು, ಬಗರಹುಕುಂ ಸಾಗುವಳಿದಾರರಿಗೆ ಹಾಗೂ ಅರಣ್ಯ ಅವಲಂಬಿತರಿಗೆ ಸರ್ಕಾರ ಹಕ್ಕುಪತ್ರ ನೀಡದೆ ವಿನಾಕಾರಣ ಕಿರುಕುಳ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನ ವಿವಿಧ ಗ್ರಾಮಗಳಾದ ತೆಗೆದುಕೊಳ್ಳುವುದಾದರೆ, ಶಿವಪುರ ಗ್ರಾಮದ ಬಗರ್ ಹುಕುಂ ಸಾಗುವಳಿ ಹಾಗೂ ಅರಣ್ಯ ಅವಲಂಬಿತ ರೈತರು ಫಾರ್ಮ್ ೫೩, ೫೭ರಲ್ಲಿ ಕಂದಾಯ ಭೂಮಿ ಇರುವುದನ್ನು ಉದ್ದೇಶ ಪೂರ್ವಕವಾಗಿ ೨೦೧೪ರಲ್ಲಿ ಸರ್ಕಾರ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿಸಿದೆ. ಬಡ ರೈತರಿಗೆ ಅರಣ್ಯ ಇಲಾಖೆ ಪದೇ ಪದೇ ಕಿರುಕುಳ ಕೊಡುತ್ತಿದೆ. ಈ ಕೂಡಲೇ ಅರಣ್ಯ ಇಲಾಖೆ ಕಿರುಕುಳ ನಿಲ್ಲಬೇಕು. ಬಡ ರೈತರಿಗೆ ಹಕ್ಕುಪತ್ರ ನೀಡಬೇಕು. ಕಂದಾಯ -ಅರಣ್ಯ -ಹುಲ್ಲುಗಾವಲು ಹಾಗೂ ಮಾಲ್ಕಿ ಜಮೀನಿನಲ್ಲಿ ವಾಸವಿರುವ ತಾಂಡಾ ಹಾಡಿ-ಹಟ್ಟಿ, ಗ್ರಾಮದ ಜನರಿಗೆ ಮನೆಗಳ ಹಾಗೂ ನಿವೇಶನಗಳ ಹಕ್ಕುಪತ್ರ ನೀಡಬೇಕು. ಕೆಲವು ಕಡೆ ಕಟ್ಟಿದ ಮನೆಗಳನ್ನು ಕೆಡವಲಾಗುತ್ತಿದೆ. ಇಂತಹ ಹೇಯ ಕೃತ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು, ಅನ್ನ, ಆಹಾರ ಸಾಮಗ್ರಿಗಳನ್ನು ಉತ್ಪಾದನೆ ಮಾಡುವ ರೈತರಿಗೆ ಜಮೀನುಗಳನ್ನು ನೀಡದೆ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡಿ ಅವರ ಜಮೀನುಗಳನ್ನು ವಶಪಡಿಸಿಕೊಂಡು ಒಕ್ಕಲೆಬ್ಬಿಸುತ್ತಿರುವುದು ಖಂಡನೀಯ ಮತ್ತು ಅವರ ಹಕ್ಕನ್ನು ದಮನ ಮಾಡುವ ಬೆಳವಣಿಗೆಯನ್ನು ಕೂಡಲೇ ಕೈ ಬಿಡಬೇಕು. ಪದೇ-ಪದೇ ಅರಣ್ಯ ಇಲಾಖೆ ಈ ವ್ಯಾಪ್ತಿಯ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಕ್ಷಣವೇ ನಿಲ್ಲಿಸಬೇಕು. ಉಳುವವನೇ ಒಡೆಯನಿಗೆ ಹೊಲಬಿಟ್ಟು ಹೋಗು ಎನ್ನುವ ಸಂಸ್ಕೃತಿಗೆ ಕಡಿವಾಣ ಹಾಕಬೇಕು ಎಂದರು.
ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿ ರಚಿಸಿ, ಸಕ್ರಿಯವಾಗಿ ಕಾರ್ಯನಿರ್ವಹಿಸಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಶಿವಪ್ಪ ಪೂಜಾರ, ಮಹೇಶ ಲಮಾಣಿ, ವೀರಪ್ಪ ಲಮಾಣಿ, ಯಲ್ಲಪ್ಪ ಬಿ., ಅಂದಲಗಿ, ಸುರೇಶ ಹರಿಜನ, ಶಿವಪುತ್ರಪ್ಪ ಹುಣಸಿಕಟ್ಟಿ, ಮಹಾಲಿಂಗಪ್ಪ ಮಾಹಾಡಹಳ್ಳಿ, ಮಲ್ಲೇಶಪ್ಪ ಅರಟಾಳ, ಸಂತೋಷ ತಡಸ್ ಇದ್ದರು.