ವಿಶೇಷ ವರದಿ

ಕನ್ನಡಪ್ರಭ ವಾರ್ತೆ, ಮೊಳಕಾಲ್ಮೂರು

ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಭಕ್ತಿ ಮತ್ತು ವಿಜ್ಞಾನದ ಅಪೂರ್ವ ಸಂಗಮವೊಂದು ನಡೆದಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗ್ರಾಮ ದೇವತೆಯ ಕೋಣನಿಗೆ ಪಶು ವೈದ್ಯರ ತಂಡವೊಂದು ಅತ್ಯಂತ ಅಪರೂಪದ ರೂಮಿನೋಟಮಿ (Rumenotomy) ಶಸ್ತ್ರಚಿಕಿತ್ಸೆ ನಡೆಸಿ, ನೂರು ಕೇಜಿಯಷ್ಟು ಕಲ್ಮಶವನ್ನು ಹೊರತೆಗೆಯುವ ಮೂಲಕ ಹೊಸ ಜೀವ ನೀಡಿದೆ.

ಗ್ರಾಮದ ಹಬ್ಬ, ಜಾತ್ರೆ ಹಾಗೂ ಧಾರ್ಮಿಕ ಆಚರಣೆಗಳ ಕೇಂದ್ರ ಬಿಂದುವಾಗಿದ್ದ ನಾಲ್ಕು ವರ್ಷದ ದೇವರ ಕೋಣ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡಿತ್ತು. ಊರಿನವರೆಲ್ಲರಿಗೂ ಪ್ರೀತಿಯಾಗಿದ್ದ ಕೋಣನ ಸ್ಥಿತಿ ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. ಎಷ್ಟು ಚಿಕಿತ್ಸೆ ನೀಡಿದರೂ ಗುಣಮುಖವಾಗದಿದ್ದಾಗ, ಕೊನೆಯ ಪ್ರಯತ್ನವಾಗಿ ಮೂವರು ತಜ್ಞ ಪಶು ವೈದ್ಯರ ತಂಡ ರಂಗಕ್ಕಿಳಿಯಿತು. ವೈದ್ಯರ ತಪಾಸಣೆಯ ವೇಳೆ ಕೋಣನ ಹೊಟ್ಟೆಯಲ್ಲಿ ಜೀರ್ಣವಾಗದ ಭಾರಿ ಪ್ರಮಾಣದ ಆಹಾರ ಸಂಗ್ರಹವಾಗಿರುವುದು ಪತ್ತೆಯಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಕೋಣಕ್ಕೆ ಅರಿವಳಿಕೆ (ಅನಸ್ತೇಷಿಯಾ) ನೀಡಿ, ಎಡಭಾಗದ ಹೊಟ್ಟೆಯಲ್ಲಿ ಸಣ್ಣ ರಂಧ್ರ ಕೊರೆಯಲಾಯಿತು. ಜಠರದ ''''''''''''''''ರುಮೆನ್'''''''''''''''' ಭಾಗವನ್ನು ತೆರೆದು ಕಾರ್ಯಾಚರಣೆ ನಡೆಸಲಾಯಿತು.

ಜಠರದಿಂದ ಬರೋಬ್ಬರಿ ಆರು ಬಕೆಟ್ ಗಳಷ್ಟು (ಸುಮಾರು 100 ಕೆಜಿ) ಜೀರ್ಣವಾಗದ ಕಲ್ಮಶವನ್ನು ಹೊರತೆಗೆಯಲಾಯಿತು. ಬಳಿಕ ರುಮೆನ್ ಹಾಗೂ ಹೊಟ್ಟೆಯ ಭಾಗವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಯಶಸ್ವಿಯಾಗಿ ಹೊಲಿಗೆ ಹಾಕಲಾಯಿತು.


ಸುಮಾರು 10 ದಿನಗಳ ಹಿಂದೆ ಅನ್ನ ಮತ್ತು ಗೋಧಿ ಪಾಯಸ ತಿಂದಿದ್ದ ಕೋಣ ಜೀರ್ಣಿಸಿಕೊಳ್ಳಲಾಗದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಸಕಾಲಕ್ಕೆ ವೈದ್ಯರ ತಂಡ ನಡೆಸಿದ ಶಸ್ತ್ರ ಚಿಕಿತ್ಸೆಯ ಪರಿಣಾಮ ಕೋಣದ ಆರೋಗ್ಯ ಸುಧಾರಣೆಯಾಗಿದ್ದು ಆರೋಗ್ಯ ಸ್ಥಿರವಾಗಿದೆ. ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ಎನ್ನುವುದು ವೈದ್ಯರ ಅಭಿಪ್ರಾಯ.ಮೂಕ ಜೀವಕ್ಕೆ ಮರುಜನ್ಮ ನೀಡಿದ ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ವಿಜಯಕುಮಾರ್, ಪಶುವೈದ್ಯರಾದ ಡಾ. ದರ್ಶನ್, ಡಾ. ಕಲಂದರ್ ಹಾಗೂ ಪಶುವೈದ್ಯಕೀಯ ಪರೀಕ್ಷಕ ಸಂದೀಪ್ ಅವರ ಸಾಹಸಕ್ಕೆ ನಾಗಸಮುದ್ರ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.