ಗ್ರಾಮಾಭಿವೃದ್ಧಿಯಲ್ಲಿ ಗ್ರಾಪಂ ಪಾತ್ರ ನಿರ್ಣಾಯಕ

| Published : Feb 13 2024, 12:45 AM IST

ಸಾರಾಂಶ

ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂನ ಚುನಾಯಿತ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಗ್ರಾಮಗಳ ಅಭಿವೃದ್ಧಿಗೆ ಹಿಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನರೇಗಾ ಯೋಜನೆಯಡಿ ಸಾಕಷ್ಟು ಅನುದಾನ ಗ್ರಾಪಂಗಳಿಗೆ ಒದಗಿಸುವಂತೆ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಪಂಗಳ ಪಾತ್ರ ನಿರ್ಣಾಯಕವಾಗಿದ್ದು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ನಿಮ್ಮೊಂದಿಗೆ ಇರುತ್ತೇವೆ ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಹಿಂದೆ ಸರಿಯಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.

ತಾಲೂಕಿನ ಅರಾಭಿಕೊತ್ತನೂರಿನಲ್ಲಿ ನೂತನ ಗ್ರಾಪಂ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಪಂ ಕಟ್ಟಡ ಜನರ ಸ್ವತ್ತು ತಮ್ಮ ಗ್ರಾಮಗಳಲ್ಲಿ ಯಾವುದೇ ಸಮಸ್ಯೆ ಇದ್ದರೂ ಪಂಚಾಯತಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ಅಭಿವೃದ್ಧಿ ಕಾರ್ಯಕ್ಕೆ ಅನುದಾನ

ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರವೇ ದೇಶವು ಅಭಿವೃದ್ಧಿಯಾಗುತ್ತದೆ, ಈ ನಿಟ್ಟಿನಲ್ಲಿ ಗ್ರಾಪಂನಲ್ಲಿ ಚುನಾಯಿತ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಭಿವೃದ್ಧಿಗೆ ಏನು ಬೇಕಾದರೂ ಕೇಳಿ ಅನುದಾನ ನೀಡಲು ಸಿದ್ದವಿದ್ದೇವೆ ಎಂದು ಹೇಳಿದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಹಿಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನರೇಗಾ ಯೋಜನೆಯಡಿ ಸಾಕಷ್ಟು ಅನುದಾನ ಗ್ರಾಪಂಗಳಿಗೆ ಒದಗಿಸುವಂತೆ ಮಾಡಿದ್ದಾರೆ, ಚುನಾಯಿತರಾದ ಜನಪ್ರತಿನಿಧಿಗಳು ಒಂದು ಕುಟುಂಬದ ರೀತಿಯಲ್ಲಿ ಇರಬೇಕು ಯಾವುದಾದರೂ ಸಣ್ಣ ಪುಟ್ಟ ತಪ್ಪುಗಳು ಇದ್ದರೆ ತಿದ್ದಿಕೊಂಡು ಅಭಿವೃದ್ಧಿಗೆ ಆಧ್ಯತೆ ನೀಡಬೇಕು ಎಂದು ತಿಳಿಸಿದರು.

₹100 ಕೋಟಿ ವೆಚ್ಚದಲ್ಲಿ ರಿಂಗ್‌ರಸ್ತೆ

ಗ್ರಾಮೀಣ ಪ್ರದೇಶಗಳಲ್ಲಿ ನಿಮ್ಮಗಳ ತೆರಿಗೆ ಹಣವನ್ನು ಅಭಿವೃದ್ಧಿಗಾಗಿಯೇ ಸರಕಾರಗಳು ಮತ್ತೆ ನಿಮಗೆ ವಾಪಸು ಕೊಡಬೇಕು ಎಂದು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈಗಾಗಲೇ ಕೋಲಾರ ನಗರದ ರಿಂಗ್ ರಸ್ತೆ ನಿರ್ಮಿಸಲು ಈಗಾಗಲೇ ೧೦೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಗೆ ೧೦ ಕೋಟಿ ಸೇರಿದಂತೆ ತಾಲೂಕಿನ ಹೋಬಳಿ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಎಂಎಲ್ಸಿ ಇಂಚರ ಗೋವಿಂದರಾಜು, ಗ್ರಾಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಉಪಾಧ್ಯಕ್ಷ ನಾಗೇಂದ್ರ, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ತಾಪಂ ಇಒ ಮುನಿಯಪ್ಪ, ಜಿ.ಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಗ್ರಾಪಂ ಸದಸ್ಯರಾದ ನಂಜುಂಡಗೌಡ, ಗೋಪಾಲಕೃಷ್ಣ, ಪಿಲ್ಲಚ್ಚಪ್ಪ, ಪಿಡಿಒ ಶಾಲಿನಿ, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ವೈ.ಶಿವಕುಮಾರ್, ಖಾಜಿಕಲ್ಲಹಳ್ಳಿ ಮುನಿರಾಜು, ಅಂಬರೀಶ್, ಶ್ರೀಧರ್ ಇದ್ದರು.