ಸಾರಾಂಶ
ಕನ್ನಡಪ್ರಭ ವಾರ್ತೆ ದಾಂಡೇಲಿ
ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಿಸಲಾದ ರಸ್ತೆಯನ್ನು ಹುಡುಕಿಕೊಡಿ ಎಂದು ದಾಂಡೇಲಿ ತಾಲೂಕಿನ ಅಗಸಲಕಟ್ಟಾ ಮತ್ತು ಆಲೂರು ಗ್ರಾಮಗಳ ಗ್ರಾಮಸ್ಥರು ಸಾಂಕೇತಿವಾಗಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಮನವಿ ಮಾಡಿದರು.ದಾಂಡೇಲಿ ತಾಲೂಕಿನ ಅಗಸಲಕಟ್ಟಾ ಮತ್ತು ಆಲೂರು ಗ್ರಾಮಗಳ ನಡುವೆ ೨೦೧೪ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೩.೮೦ ಕಿಮೀ ರಸ್ತೆ ಮಾಡುವ ಗುತ್ತಿಗೆ ಕೆಲಸವು ಸುಮಾರು ₹೩,೨೦,೪೬,೦೦೦/- ಮೊತ್ತದ ರಸ್ತೆ ಕಾಮಗಾರಿ ಆರಂಭಗೊಂಡು ೨೦೧೬ರಲ್ಲಿ ಮುಗಿದಿದೆ. ಈ ರಸ್ತೆಯನ್ನು ೫ ವರ್ಷಗಳವರೆಗೆ ನಿರ್ವಹಣೆ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಯಲ್ಲಾಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಿಂದ ಪಡೆದ ದಾಖಲೆಗಳಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜೊತೆಗೆ ರಸ್ತೆ ಎಲ್ಲಿದೆ ಎಂದು ಹುಡುಕಿಕೊಡಿ ಎಂದಿದ್ದಾರೆ.ಪ್ರತಿವರ್ಷ ಕಬ್ಬು ಕಟಾವು ಸಮಯದಲ್ಲಿ ಹೊಲದವರಿಗೆ ಕಬ್ಬು ಸಾಗಿಸಲು ಸಮಸ್ಯೆಯಾಗುತ್ತಿದ್ದು, ಈ ಸಮಸ್ಯೆಯ ಕಾರಣ ರಸ್ತೆ ನಿರ್ಮಾಣದ ಅವಶ್ಯವಾಗಿದೆ ಮತ್ತು ಹಳಿಯಾಳ-ದಾಂಡೇಲಿಗೆ ಸಂಪರ್ಕಿಸಲು ಸಮೀಪದ ಮಾರ್ಗ ಇದಾಗಿದೆ. ನ. ೧ರೊಳಗಾಗಿ ಸಂಬಂಧದಪಟ್ಟ ಅಧಿಕಾರಿಗಳು ರಸ್ತೆ ಹುಡುಕಿಕೊಡದಿದ್ದರೆ, ಆ ಸಮಯದಲ್ಲಿದ್ದ ಎಲ್ಲ ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ಗ್ರಾಮಸ್ಥರ ಪರವಾಗಿ ಗೌರವಿಸಿ ಸನ್ಮಾನಿಸಲಾಗುವುದು. ಆಲೂರಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.ಈ ಸಂದರ್ಭ ಗ್ರಾಮಸ್ಥರಾದ ಶಂಕರ ನಾರಾಯಣ ಮಿರಾಶಿ, ಪಾಂಡುರಂಗ ವಿಠೋಬಾ ವಟ್ಲೇಕರ, ನಾರಾಯಣ ಸೋಮಣ್ಣಾ ಜಾಧವ, ಶಿವಾಜಿ ನಾರಾಯಣ ಭಟ್ಟ, ಮಾರುತಿ ಲಕ್ಷ್ಮಣ ಕಾಂಬ್ರೇಕರ, ಗಿರೀಶ ಯಲ್ಲಾರಿ ಟೋಸುರ, ಗಣಪತಿ ಅರ್ಜುನ ಸೂರ್ಯವಂಶಿ, ಸಂಜು ಮೀನಪ್ಪಾ ಮಿರಾಶಿ, ಸಂಜು ವಸಂತ ಸೊನಶೇಟ, ನಾರಾಯಣ ವಿಠ್ಠಲ ಚೌಥೆ, ವಾಮನ ನಾರಾಯಣ ಮಿರಾಶಿ, ಪರಶುರಾಮ ಬಡೀಗೇರ, ಸುಭಾಸ ಚೋಪಡೆ, ಆನಂದ ಲೋಕಪ್ಪಾ ಮಾರುತಿ ಗೌಡಾ, ಹೊನ್ನಪ್ಪಾ ಲೋಕಪ್ಪ ಬಾದ್ರಿ, ನಾರಾಯಣ ಹಸರಂಬಿ, ಯಲ್ಲಾರಿ ಮಾರುತಿ ಗೌಡಾ, ಪರಶುರಾಮ ಹಣಬರ, ಶಿವಾಜಿ ಹಳದೊಳಕರ, ಮಂಜುನಾಥ ಹಸರಂಬಿ, ರಮೇಶ ಹನುಮಂತ ಹಸರಂಬಿ, ಬಾಳು ಕಲ್ಲಪ್ಪಾ ಬೇಣಚೇಕರ ಮುಂತಾದವರಿದ್ದರು.