ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕರ್ಣ
ಪ್ರವಾಸಿ ತಾಣಕ್ಕೆ ತೆರಳಲು ಒಂದು ತಾಸಿಗೂ ಅಧಿಕ ಕಾಲ ಬಸ್ ಇಲ್ಲದೆ ಪ್ರಯಾಣಿಕರು ಕುಮಟಾ ಬಸ್ ನಿಲ್ದಾಣದಲ್ಲಿ ಪರದಾಡುವಂತಾಗಿದೆ.ಸಂಜೆ ೫.೩೦ರಿಂದ ಏಳು ಗಂಟೆಯವರೆಗೂ ಯಾವುದೇ ಬಸ್ ಇಲ್ಲದೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಪಂದಿಸದ ಅಧಿಕಾರಿಗಳು:ಇಲ್ಲಿನ ತೊಂದರೆ ಬಗ್ಗೆ ಸಾರ್ವಜನಿಕರು ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಕರೆ ಮಾಡಿದರೆ ತಾನು ಮೀಟಿಂಗ್‌ನಲ್ಲಿ ಇದ್ದೇನೆ ಎನ್ನುತ್ತ ದೂರವಾಣಿ ಕರೆ ಕಟ್ ಮಾಡಿ ನಿರ್ಲಕ್ಷಿಸಿದ್ದಾರೆ. ಕುಮಟಾ ಘಟಕ ವ್ಯವಸ್ಥಾಪಕರನ್ನ ವಿಚಾರಿಸಿದರೆ ಯಾವುದೇ ಸ್ಪಂದನೆ ದೊರೆಯಲಿಲ್ಲ.
ನೆರವಿಗೆ ಬಂದ ಶಾಸಕರು:ಬಸ್ ತೊಂದರೆ ಬಗ್ಗೆ ಶಾಸಕರ ಆಪ್ತ ಕಾರ್ಯದರ್ಶಿಗೆ ಜನರು ಫೋನಾಯಿಸಿ ತಿಳಿಸಿದಾಗ ತಕ್ಷಣ ಸ್ಪಂದಿಸಿ, ಬಸ್ ವ್ಯವಸ್ಥೆಗೆ ಸೂಚಿಸಿದ್ದು, ಅಂತೂ ೭ ಗಂಟೆಗೆ ಬಿಡುವ ಬಸ್‌ನ್ನ ೬.೩೫ಕ್ಕೆ ತಂದು ನಿಲ್ಲಿಸಿ ಕುರಿ ತುಂಬಿದಂತೆ ಜನರ ತುಂಬಿ ಬಿಡಲಾಯಿತು. ಶಾಸಕರ ಪೋನ್ ಬರದಿದ್ದರೆ ಈ ಬಸ್ ಇನ್ನೆಷ್ಟು ಹೊತ್ತಿಗೆ ಬರುತ್ತಿತ್ತು ಎಂದು ಜನರು ಅಡಿಕೊಳ್ಳುತ್ತಿದ್ದು ಕಂಡುಬಂತು. ಅಂತೂ ಅಲ್ಲಿಲ್ಲಿ ನಿಲ್ಲಿಸುತ್ತಾ ಒಂದೂವರೆ ತಾಸಿಗೆ ಮೂವತ್ತು ಕಿಮೀ ಕ್ರಮಿಸಿ ಗೋಕರ್ಣ ತಲುಪಿತು.
ಈ ಬಗ್ಗೆ ಗೋಕರ್ಣಕ್ಕೆ ತೆರಳಲು ಬಳ್ಳಾರಿಯಿಂದ ಬಂದ್ ಯಾತ್ರಿಕ ಬಸವರಾಜ್ ಪ್ರತಿಕ್ರಿಯಿಸಿ, ಪ್ರವಾಸಿ ತಾಣ ಎನ್ನುವುದಾದರೂ ಪರಿಗಣಿಸಿ ನಿಗದಿತ ಸಮಯಕ್ಕೆ ಬಸ್ ಬಾರದಿದ್ದಾಗ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ.ನಿತ್ಯ ಸಂಚರಿಸುವ ಗೋಕರ್ಣ ಭಾಗದ ಉದ್ಯೋಗಿಗಳು ಮಾತನಾಡಿ, ನಿತ್ಯ ಸಂಜೆ ಒಂದಿಲ್ಲೊಂದು ಕಾರಣದಿಂದ ಬಸ್ ಇಲ್ಲದೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಾರಿಗೆ ಸಂಸ್ಥೆಯವರು ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಬಸ್ ನಿಲುಗಡೆಗೆ ಒತ್ತಾಯ
ಕುಮಟಾದಿಂದ ೧.೪೫ಕ್ಕೆ ಬಿಡುವ ಭಟ್ಕಳ ಗೋಕರ್ಣ ಬಸ್‌ಗೆ ವಿದ್ಯಾರ್ಥಿಗಳ ಪಾಸ್‌ಗೆ ಅನುಮತಿ ಇಲ್ಲ ಎಂದು ಬಿಟ್ಟು ಬರುತ್ತಿದ್ದು, ಇದರ ಜೊತೆ ಮಿರ್ಜಾನ, ಹಿರೇಗುತ್ತಿ, ಸಾಣಿಕಟ್ಟಾದಲ್ಲಿ ನಿಲುಗಡೆಗೊಳಿಸುತ್ತಿಲ್ಲ ಎಂದು ಸಾರ್ವಜನಿಕರ ಹೇಳುತ್ತಿದ್ದು, ತಕ್ಷಣ ಅನುಕೂಲತೆ ಒದಗಿಸುವಂತೆ ಆಗ್ರಹಿಸಿದ್ದಾರೆ.ಹೊರರಾಜ್ಯದ ಬಸ್ ಅಥವಾ ಇಲ್ಲಿಂದ ಹೊರ ರಾಜ್ಯಕ್ಕೆ ತೆರಳುವ ಬಸ್‌ಗೆ ವಿದ್ಯಾರ್ಥಿಗಳು ಪ್ರಯಾಣಿಸಲು ಅನುಮತಿ ಇಲ್ಲ. ಆದರೆ ನಮ್ಮದೆ ಜಿಲ್ಲೆಯ ನಮ್ಮದೇ ತಾಲೂಕಿನ ಸ್ಥಳಕ್ಕೆ ತೆರಳುವ ಬಸ್‌ಗೆ ವಿದ್ಯಾರ್ಥಿಗಳನ್ನ ನಿಷೇಧಿಸಿರುವುದು ಏಕೆ ಎಂಬುದು ತಿಳಿಯದಾಗಿದೆ. ರಸ್ತೆಯಲ್ಲಿ ಕೆಟ್ಟು ನಿಲ್ಲುವ ಬಸ್‌ಗಳ ಸಂಖ್ಯೆ ಹೆಚ್ಚಾಗಿರುವ ಇಂದಿನ ದಿನದಲ್ಲಿ ಒಂದೆರಡು ಬಸ್ ಕೆಲವೇ ನಿಲುಗಡೆಯೊಂದಿಗೆ ನೇರವಾಗಿ ತೆರಳಲು ಇದ್ದು, ಇದಕ್ಕೂ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ತೊಂದರೆ ನೀಡುತ್ತಿದ್ದು, ಈ ಬಗ್ಗೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ.ನಿಲುಗಡೆ ಇಲ್ಲ:ಯಾವುದೇ ತಡೆರಹಿತ ಸಾರಿಗೆಯಾದರೂ ಸಹ ಬೆಟ್ಕುಳಿ, ಮಿರ್ಜಾನ, ಬರ್ಗಿ, ಹಿರೇಗುತ್ತಿ ಹಾಗೂ ಸಾಣಿಕಟ್ಟಾದಲ್ಲಿ ನಿಲುಗಡೆಗೊಳ್ಳುತ್ತದೆ. ಆದರೆ ಇದು ಸಾಮಾನ್ಯ ಸಾರಿಗೆಯಾಗಿದ್ದು, ಈ ಸ್ಥಳಗಳಿಗೆ ನಿಲುಗಡೆ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದು, ಅದರೆ ಇಲ್ಲಿ ನಿಲ್ಲಸದೆ ಪ್ರಯಾಣಿಕರ ಬಿಟ್ಟು ತೆರಳುತ್ತಿದ್ದಾರೆ. ಬಸ್ ೩.೧೫ಕ್ಕೆ ಗೋಕರ್ಣದಿಂದ ಕುಮಟಾಕ್ಕೆ ತೆರಳುತ್ತದೆ ಈ ಸಮಯದಲ್ಲಿ ಸಹ ಬಸ್ ನಿಗದಿತ ಸ್ಥಳದಲ್ಲಿ ನಿಲುಗಡೆ ನೀಡದೆ, ವಿದ್ಯಾರ್ಥಿಗಳನ್ನ ಹತ್ತಿಸಿಕೊಳ್ಳದೆ ತೆರಳುತ್ತಿದ್ದಾರೆ.