ಸಾರಾಂಶ
ಕುಷ್ಟಗಿ: ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು, ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕ ಭಾವ ಮೂಡುತ್ತದೆ ಎಂದು ಬಿಇಓ ಉಮಾದೇವಿ ಬಸಾಪುರ ಹೇಳಿದರು.
ತಾಲೂಕಿನ ಕೊರಡಕೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 2007-08ನೇಯ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ನಡೆದ ಗುರು ನಮನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಯ ಸಾಧನೆ ಹಿಂದೆ ಗುರುಗಳ ಕಾರ್ಯ ಮಹತ್ತರವಾಗಿದೆ, ಕಲ್ಲನ್ನು ಮೂರ್ತಿಯನ್ನಾಗಿ ಮಾಡುವ ಶಕ್ತಿ ಒಬ್ಬ ಶಿಕ್ಷಕ ಹೊಂದಿದ್ದಾನೆ. ಶಿಕ್ಷಕರಾದವರು ಕೇವಲ ಶಿಕ್ಷಣವನ್ನಲ್ಲದೆ ಮನುಷ್ಯನಿಗೆ ಸಾಮಾಜಿಕ ಮತ್ತು ಮಾನವೀಯ ಮೌಲ್ಯ ತುಂಬುವ ಕೆಲಸ ಮಾಡುತ್ತಾರೆ ಎಂದರು.
ಅಕ್ಷರ ಬಿತ್ತುವ ಶಿಕ್ಷಕ ಎರಡನೆಯ ತಂದೆ ತಾಯಿ ಸಮಾನ. ತಮ್ಮವಿದ್ಯಾರ್ಥಿಗಳನ್ನು ಉನ್ನತ ಸ್ಥಾನಮಾನದಲ್ಲಿ ಕಾಣುವುದು ಶಿಕ್ಷಕರ ಕನಸು ನನಸಾದಂತೆ. ಹೀಗಾಗಿ ಜೀವನದಲ್ಲಿ ಸಮಾಜದಲ್ಲಿ ಉತ್ತಮ ಗೌರವ ತರುವ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಂಡರೆ ಅದೇ ಗುರುವಿಗೆ ಹೆಮ್ಮೆಯ ವಿಷಯ ಎಂದರು.ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿ ವೆಂಕಟೇಶ ಕೊಂಕಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆ ನೆನಪಿಸಿಕೊಂಡು ವಂದನೆ ಸಲ್ಲಿಸುವ ಬಹು ಪವಿತ್ರ ಕಾರ್ಯ ಮಾಡುವುದು, ಕೇವಲ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ ಹಾಗೇ ಅಲ್ಲ ಬದಲಿಗೆ ಎಲ್ಲ ಗುರುಗಳ ಶಿಕ್ಷಣ ವೃತ್ತಿಗೆ ಮಹತ್ವ ಕೊಟ್ಟಂತೆ ಎಂದು ಹೇಳಿದರು.
ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ,ಅದರಲ್ಲೂ ಬದುಕಿನ ಮೆಟ್ಟಿಲು ಗಟ್ಟಿಗೊಳಿಸಲು ನಿರಂತರವಾಗಿ ಶ್ರಮಿಸುವ ಗುರುಗಳ ಕಾರ್ಯ ಎಂದಿಗೂ ಮರೆಯಲು ಅಸಾಧ್ಯ ಎಂದು ಹೇಳಿದರು.ನಂತರ ಹಳೆ ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಶಿಕ್ಷಕರು ಹಾಕಿಕೊಟ್ಟ ದಾರಿ ನೆನೆದರು. ಶಿಕ್ಷಕರು ನಮಗೆ ಉತ್ತಮ ಶಿಕ್ಷಣ ನೀಡಿ ಬದುಕಿನಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಲು ದಾರಿದೀಪ ಆಗಿದ್ದಾರೆ. ಅವರ ಮಾರ್ಗದರ್ಶನ, ನಮಗೆ ಕೊಟ್ಟ ವಿದ್ಯೆ ಕೊನೆಯ ಉಸಿರು ಇರುವವರೆಗೂ ಋಣ ತೀರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಶಿಕ್ಷಕರ ಪಾತ್ರವೇ ಮುಖ್ಯ ಎಂದು ಮೆಲುಕು ಹಾಕಿದರು. ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ಶಿಕ್ಷಕರನ್ನು ಕಳಶ ಮತ್ತು ಕುಂಭ ಹೊತ್ತುಕೊಂಡು ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಿವಾನಂದಯ್ಯ ಗುರುವಿನ, ನಂಜಯ್ಯ ಗುರುವಿನ, ಸಿದ್ದಯ್ಯ ಗುರುವಿನ, ಹನಮಮ್ಮ ಹನಮಗೌಡ ಪಾಟೀಲ, ಮಲ್ಲಪ್ಪ ಭಂಡಾರಿ, ಬೀರಪ್ಪ ಕುರಿ, ಶಿವಕುಮಾರ ಹಲಕುರ್ಕಿ, ಧರ್ಮಕುಮಾರ ಕಂಬಳಿ, ಶಂಕರಗೌಡ ಪಾಟೀಲ, ಶಿವುಕುಮಾರ ಅಂಗಡಿ, ರಾಮೇಶ್ವರ ಡಾಣಿ, ವಿಕ್ರಾಂತ ಗಜೇಂದ್ರಗಡ, ಸಯ್ಯದ್ ತಸ್ಕಿನ, ಬಸವರಾಜ ನೆಲಗನಿ, ನಾಗಯ್ಯ ಬಿನ್ನಾಳಮಠ, ರಾಜಾಸಾಬ್ ನದಾಫ್, ಈಶಪ್ಪ ಕಂದಕೂರು, ಮಾರುತಿ ಗುಮಗೇರಿ, ಹೊನ್ನಪ್ಪ ಡೊಳ್ಳಿನ, ಶರಣಪ್ಪ ಉಪ್ಪಾರ, ಸಲಿಮಾ ಬೇಗಂ, ಮಲ್ಲಪ್ಪ ಆಡಿನ, ರೋಹಿಣಿ, ಗಂಗಮ್ಮ ದೇಸಾಯಿ, ಮಾರುತಿ ಗುಮಗೇರಿ ಸೇರಿದಂತೆ 2007-08ನೇಯ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳು ಇದ್ದರು.