ಶ್ರೀ ಅಖಿಲ ಹವ್ಯಕ ಮಹಾಸಭಾದ ಬೆಳಕೆಯ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಹವ್ಯಕ ಸಭಾಭವನವನ್ನು ಶನಿವಾರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಉದ್ಘಾಟಿಸಿದರು.

ಭಟ್ಕಳ: ಶ್ರೀ ಅಖಿಲ ಹವ್ಯಕ ಮಹಾಸಭಾದ ಬೆಳಕೆಯ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಹವ್ಯಕ ಸಭಾಭವನವನ್ನು ಶನಿವಾರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಉದ್ಘಾಟಿಸಿದರು.

ಆನಂತರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಬೆಳಕೆ ಹೆಸರೇ ವಿಶೇಷವಾಗಿದೆ. ಬೆಳಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಜಾಗವನ್ನು ಹವ್ಯಕ ಮಹಾಸಭಾದವರು ಮಂಜುನಾಥ ಬಿಲ್ಲವರಿಂದ ದಾನವಾಗಿ ಪಡೆದ ಆನಂತರ ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಜಾಗ ದಾನ ನೀಡಿದ ಆನಂತರ ಮುಂಜುನಾಥ ಬಿಲ್ಲವ ಅವರಿಗೂ ಒಳಿತಾಗಿದೆ. ಮೂರ್ನಾಲ್ಕು ವರ್ಷದಲ್ಲಿ ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಕ್ಷೇತ್ರ ಬೆಳೆಸಲು ಊರವರ ಸಹಕಾರ ಅಗತ್ಯವಾಗಿದೆ ಎಂದರು.

ಕುಂಬಳೆ, ಕಾಸರಕೋಡು, ಮಂಗಳೂರು ಮುಂತಾದ ದೂರದ ಊರಿನ ಭಕ್ತರು ಗೋಕರ್ಣದ ಅಶೋಕೆಯ ನಮ್ಮ ಮಠಕ್ಕೆ ಬರುವಾಗ ಬೆಳಕೆಯಲ್ಲಿ ಸ್ವಲ್ಪ ಹೊತ್ತು ಇದ್ದು ವಿಶ್ರಾಂತಿ ಪಡೆದು ಬರಲು ಅನುಕೂಲವಾಗಿದೆ. ಹವ್ಯಕ ಮಹಾಸಭಾದವರು ಸಮಾಜದ ಅಭಿವೃದ್ಧಿಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದು, ಅದೆಲ್ಲವೂ ಯಶಸ್ವಿಯಾಗಲಿದೆ. ಕ್ಷೇತ್ರ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಬೆಳಕೆಯಲ್ಲಿ ಹವ್ಯಕ ಮಹಾಸಭಾದವರು ಸುಸಜ್ಜಿತ ಸಭಾಭವನ ನಿರ್ಮಿಸಿರುವುದು ಶ್ಲಾಘನೀಯ. ನನ್ನ ಕ್ಷೇತ್ರದಲ್ಲಿ ಮೂರು ಕಡೆ ಹವ್ಯಕ ಸಭಾಭವನ ಆದಂತಾಗಿದೆ. ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಮೇಲೆ ಅಪಾರ ಗೌರವ, ಭಕ್ತಿ ಇಟ್ಟುಕೊಂಡಿದ್ದೇನೆ. ಹವ್ಯಕ ಸಮಾಜದ ಮೇಲೂ ಅಪಾರ ಪ್ರೀತಿ, ವಿಶ್ವಾಸ ಇದೆ. ಬೆಳಕೆ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡುತ್ತೇನೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಅವರು, ಬೆಳಕೆ ಸುತ್ತಮುತ್ತಲ ಜನರಿಗೆ ಅನುಕೂಲವಾಗಲು ಮತ್ತು ಕ್ಷೇತ್ರ ಬೆಳೆಯುವುದಕ್ಕೋಸ್ಕರ ಸುಸಜ್ಜಿತ ಸಭಾಭವನ ನಿರ್ಮಿಸಲಾಗಿದೆ. ಇದನ್ನು ಸ್ಥಳೀಯರು ಉಪಯೋಗಿಸಿಕೊಳ್ಳಬೇಕು ಎಂದರು.

ರಾಮಚಂದ್ರಾಪುರ ಮಠದ ಶಾಸನ ತಂತ್ರ ಪ್ರಮುಖ ಮೋಹನ ಹೆಗಡೆ, ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿದರು. ಶ್ರೀಕಾಂತ ಹೆಗಡೆ, ಹರ್ಷ ಕೊಂಡದಕುಳಿ ಕಾರ್ಯಕ್ರಮ ನಿರೂಪಿಸಿದರು. ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತಕುಮಾರ ವಂದಿಸಿದರು.

ಕ್ಷೇತ್ರದಲ್ಲಿ ವರ್ಧಂತ್ಯುತ್ಸವೂ ನಡೆಯಿತು. ಬೆಳಗ್ಗೆ ಗಣಪತಿ ಪೂಜೆ, ಕಲಾವೃದ್ಧಿ ಹವನ, ತತ್ವ ಹವನ, ಕಲಶಾಭಿಷೇಕ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು.