ಇಲ್ಲಿನ ಬಸ್ ಡಿಪೋ ವ್ಯವಸ್ಥಾಪಕರು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಅವಮಾನ ಮಾಡಿದ್ದಾರೆ. ಶಿಷ್ಟಾಚಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅವರ ಬೆಂಬಲಿಗರು ಸೋಮವಾರ ಇಲ್ಲಿನ ಡಿಪೋ ಗೇಟ್ ಬಳಿ ಹಾಗೂ ಬಸ್ ನಿಲ್ದಾಣದ ಮುಖ್ಯದ್ವಾರವಾದ ಅಂಬಾದೇವಿ ದೇವಸ್ಥಾನ ಮುಂಭಾಗದಲ್ಲಿ ಧರಣಿ ಕುಳಿತು ಬಸ್‌ಗಳ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಇಲ್ಲಿನ ಬಸ್ ಡಿಪೋ ವ್ಯವಸ್ಥಾಪಕರು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರಿಗೆ ಅವಮಾನ ಮಾಡಿದ್ದಾರೆ. ಶಿಷ್ಟಾಚಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅವರ ಬೆಂಬಲಿಗರು ಸೋಮವಾರ ಇಲ್ಲಿನ ಡಿಪೋ ಗೇಟ್ ಬಳಿ ಹಾಗೂ ಬಸ್ ನಿಲ್ದಾಣದ ಮುಖ್ಯದ್ವಾರವಾದ ಅಂಬಾದೇವಿ ದೇವಸ್ಥಾನ ಮುಂಭಾಗದಲ್ಲಿ ಧರಣಿ ಕುಳಿತು ಬಸ್‌ಗಳ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಸ್ಥಳೀಯ ಬಸ್ ನಿಲ್ದಾಣದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶಾಸಕರ ಅನುದಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿದ್ಯಾರ್ಥಿ ರಥ ವಿಶೇಷ ಬಸ್ ಸೌಕರ್ಯ ಒದಗಿಸಿದ್ದಕ್ಕಾಗಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಗಳೊಂದಿಗೆ ಶಾಸಕರ ಸಂವಾದ ಮತ್ತು ನೂತನ ಬಸ್ಗಳಿಗೆ ಚಾಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಹಂಪನಗೌಡ ಬಾದರ್ಲಿ ತಮ್ಮ ಮಾತು ಮುಗಿಸಿ ವೇದಿಕೆಯಿಂದ ಇಳಿದು ಸಮಯವಾಗಿದೆ. ಎಲ್ಲರೂ ಬನ್ನಿ ಬಸ್‌ಗಳಿಗೆ ಚಾಲನೆ ಕೊಡೋಣ ಎಂದು ಹೋಗಿ ಬಸ್‌ಗಳಿಗೆ ಪೂಜೆ ಮಾಡಿ ಚಾಲನೆ ಕೊಟ್ಟರು.

ಇದರಿಂದಾಗಿ ಕುಪಿತಗೊಂಡ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಬೆಂಬಲಿಗರು ಎಂಎಲ್ಸಿ ಸಾಹೇಬ್ರಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಯಕ್ರಮದಲ್ಲಿ ಕಿರುಚಾಡಿ, ಡಿಪೋ ಗೇಟ್ ಹಾಕಿ ಮುಂದೆ ಧರಣಿ ಕುಳಿತು, ಡಿಪೋ ವ್ಯವಸ್ಥಾಪಕ ಮತ್ತು ಡಿಟಿಓ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ನಂತರ ಸ್ಥಳಕ್ಕೆ ಬಂದ ಡಿಪೋ ವ್ಯವಸ್ಥಾಪಕ ಹೊನ್ನಪ್ಪ ಈ ಕಾರ್ಯಕ್ರಮವನ್ನು ಶಾಸಕರೇ ಆಯೋಜಿಸಿದ್ದಾರೆಯೇ ಹೊರತು, ನಮ್ಮ ಇಲಾಖೆಯಿಂದಲ್ಲ. ಶಾಸಕರು ಹೇಳಿದ್ದರಿಂದ ಎಂಎಲ್ಸಿ ಸಾಹೇಬ್ರರಿಗೂ ಆಹ್ವಾನಿಸಿದ್ದೇವೆ. ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರಿಂದ ಶಾಮಿಯಾನ, ಕುರ್ಚಿಗಳು ಮತ್ತು ಹೂವಿನ ಹಾರವನ್ನು ನಾವು ತಂದಿದ್ದೇವೆ. ಈ ಕುರಿತು ಮೌಖಿಕವಾಗಿ ಜಿಲ್ಲಾ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಎಂಎಲ್ಸಿ ಅವರನ್ನು ಗೌರವಯುತವಾಗಿಯೇ ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.

ಇದಕ್ಕೆ ಒಪ್ಪದ ಬೆಂಬಲಿಗರು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಭಾಷಣ ಮಾಡಲು ಅವಕಾಶ ಕೊಡದೆ, ಅವಮಾನ ಮಾಡಿ, ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಅಧಿಕಾರಿಗಳು ಸೇರಿ ರಾಜಕಾರಣ ಮಾಡುತ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿ ಡಿಪೋ ವ್ಯವಸ್ಥಾಪಕರನ್ನು ತೀವ್ರ ತರಾಟೆ ತೆಗೆದು ಕೊಂಡರು. ನಂತರ ಏಕಾಏಕಿ ಗೇಟ್ ತಳ್ಳಿ ಡಿಪೋ ಕಚೇರಿ ಒಳಗೆ ನುಗ್ಗಲು ಪ್ರಯತ್ನಿಸಿದ ಬೆಂಬಲಿಗರನ್ನು ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀರಾರೆಡ್ಡಿ ಎಚ್, ಸಂಚಾರಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಚಂದ್ರಶೇಖರ ಹಾಗೂ ಸಿಬ್ಬಂದಿ ತಡೆಹಿಡಿದು ಹೊರಗೆ ತಳ್ಳಿದರು.

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಎಂಎಲ್ಸಿ ಬೆಂಬಲಿಗರು ಬಸ್ ನಿಲ್ದಾಣದ ಮುಖ್ಯದ್ವಾರವಾದ ಅಂಬಾದೇವಿ ದೇವಸ್ಥಾನದ ಮುಂಭಾಗದಲ್ಲಿ ಕುಳಿತು ಬಸ್ಗಳ ಸಂಚಾರ ತಡೆದು ಪ್ರತಿಭಟಿಸಿದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಡಿವೈಎಸ್ಪಿ ಚಂದ್ರಶೇಖರ ಅವರು ಬಸ್ಗಳ ಸಂಚಾರಕ್ಕೆ ಅಡ್ಡಪಡಿಸಿ ಪ್ರಯಾಣಿಕರಿಗೆ ತೊಂದರೆ ನೀಡಿದ ಎಂಎಲ್ಸಿ ಬೆಂಬಲಿಗರನ್ನು ಬಂಧಿಸಿ, ಪೊಲೀಸ್ ಕಾರುಗಳಲ್ಲಿ ಠಾಣೆಗೆ ಕರೆದೊಯ್ದರು. ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸಿದರು.