ಐತಿಹಾಸಿಕ ಕ್ರೈಸ್ತ ದೇವಾಲಯವಾದ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿರಾಜಪೇಟೆ: ಪಟ್ಟಣದ ಐತಿಹಾಸಿಕ ಕ್ರೈಸ್ತ ದೇವಾಲಯವಾದ ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಧ್ಯರಾತ್ರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚ್ ನಲ್ಲಿ ವಿಶೇಷ ಬಲಿಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಗಾಯನ ವೃಂದದವರಿಂದ ಕ್ರಿಸ್ತನ ನಾಮಾವಳಿಯ ಸ್ತುತಿ ಹಾಗೂ ಭಜನಾವಳಿ ನಡೆಯಿತು. ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳು ಹಾಗೂ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್ ಬಲಿಪೂಜೆ ಸಲ್ಲಿಸುವ ಮೂಲಕ ಕ್ರಿಸ್ಮಸ್ ಸಂದೇಶವನ್ನು ಭಕ್ತರಿಗೆ ನೀಡಿದರು ಮತ್ತು ಪ್ರವಚನ ನೀಡಿದರು. ಈ ಸಂದರ್ಭ ಬೈಬಲ್ ಪಠಣ ಮಾಡಲಾಯಿತು. ನೆರೆದಿದ್ದ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಧರ್ಮಗುರುಗಳು ಬಾಲ ಯೇಸುವಿನ ಮೂರ್ತಿಯನ್ನು ಮಂತ್ರಿಸಿ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗೋದಲಿಯಲ್ಲಿ ಪ್ರತಿಷ್ಠಾಪಿಸಿ ಪ್ರಾರ್ಥಿಸಿದರು. ತದನಂತರ ನೆರೆದಿದ್ದ ಭಕ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿದರು. ನೆರೆದಿದ್ದ ಭಕ್ತರಿಗೆ ಕೇಕ್ ನ್ನು ವಿತರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸಿಡಿಮದ್ದನ್ನು ಸಿಡಿಸುವ ಮೂಲಕ ಸಂಭ್ರಮಿಸಿದರು. ಚರ್ಚ್ ನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಈ ಸಂದರ್ಭ ಫಾ. ವಿನೋದ್ ಸಲ್ಡಾನ, ಜಯಂತ್, ಕನ್ಯಾ ಸ್ತ್ರೀಯರು, ಚರ್ಚ್ ಪಾಲನಾ ಸಮಿತಿಯವರು, ಭಕ್ತಾದಿಗಳು ಇದ್ದರು.
