ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಮೂಲಕ ಸಾಮರಸ್ಯ ಸಾರಿದ ಪ್ರಭು ಯೇಸು ಕ್ರಿಸ್ತನ ಆದರ್ಶ ಅಳವಡಿಸಿಕೊಳ್ಳಿ
ಹೂವಿನಹಡಗಲಿ: ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಮೂಲಕ ಸಾಮರಸ್ಯ ಸಾರಿದ ಪ್ರಭು ಯೇಸು ಕ್ರಿಸ್ತನ ಆದರ್ಶ ಅಳವಡಿಸಿಕೊಳ್ಳಿ ಎಂದು ಡಾ. ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾರ್ಮೆಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಪ್ರಭು ಯೇಸು ಕ್ರಿಸ್ತನ ಜಯಂತಿ ಅಂಗವಾಗಿ ಸರ್ವಧರ್ಮ ಸಮನ್ವಯ ಶುಭ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ಜಗತ್ತಿನಾದ್ಯಂತ ಯೇಸು ಕ್ರಿಸ್ತನ ಜಯಂತಿ ಆಚರಿಸಲಾಗುತ್ತಿದೆ. ಮನುಜ ಪ್ರೀತಿ ವಿಶ್ವಮಾನವ ರೂಪದಲ್ಲಿ ಕ್ರಿಸ್ತನ ಪ್ರಭಾವಳಿ ಸಂದೇಶ ಇಂದಿಗೂ ಜಗತ್ತನ್ನು ಬೆಳಗಿಸುತ್ತಲೇ ಇದೆ ಎಂದರು.
ಹಿರೆಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮದವರು ದಾರ್ಶನಿಕರ ಅನುಭವ ಚಿಂತನೆಯಂತೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವಿಸಬೇಕು. ದ್ವೇಷ, ಅಸೂಯೆ, ಮತ್ಸರ, ಸ್ವಾರ್ಥ ಮರೆತು ಸಮಾಜದಲ್ಲಿ ಒಗ್ಗಟ್ಟಾಗಿ ಬಾಳಬೇಕು ಎಂದರು.ಹಜರತ್ ಮೌಲಾನ ಮಾತನಾಡಿ, ಹಬ್ಬಗಳು ಜನಸಾಮಾನ್ಯರಲ್ಲಿ ಸಾಮರಸ್ಯ ಮೂಡಿಸುತ್ತವೆ. ಸಮಾಜದಲ್ಲಿ ದ್ವೇಷ ಅಳಿದು ಶಾಂತಿ ನೆಮ್ಮದಿ ನೆಲೆಸಲಿ ಎಂದು ತಿಳಿಸಿದರು.
ಶ್ರೀರಾಮ ದೇವಸ್ಥಾನ ಧರ್ಮದರ್ಶಿ ಡಾ.ರಾಕೇಶಯ್ಯ ರಾಮಸ್ವಾಮಿ ಮಾತನಾಡಿ, ವಿಶ್ವಮಾನವ ಪ್ರಜ್ಞೆ ಅರಿವು ಮೂಡಿಸುವಲ್ಲಿ ಯೇಸು ಕ್ರಿಸ್ತನ ನಡೆ ನುಡಿ ಅನುಸರಿಸಬೇಕು ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ಪಟ್ಟಣದ ಕಾರ್ಮೆಲ್ ಚರ್ಚ್ ನಲ್ಲಿ ಪ್ರತಿವರ್ಷವೂ ವಿನೂತನವಾಗಿ ಕ್ರಿಸ್ಮಸ್ ಹಬ್ಬ ಆಚರಿಸುತ್ತಾರೆ. ಶೈಕ್ಷಣಿಕ ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗೆ ಕಾರ್ಮೆಲ್ ಜ್ಯೋತಿ ಸಂಸ್ಥೆಯ ಮುಖ್ಯಸ್ಥರು ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿ, ಅನ್ಯ ಧರ್ಮೀಯರನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದರು.ಕಾರ್ಮೆಲ್ ಸೇವಾ ಟ್ರಸ್ಟ್‌ನ ಫಾ.ಡೆನ್ಜಿಲ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ. ವೀರೇಂದ್ರ ಪಾಟೀಲ್, ಫಾ.ವಿಕ್ಟರ್ ವಿಜಯ್ ಪೈಸ್, ಫಾ.ಪ್ರಕಾಶ್ ರೆಬೆಲ್ಲೋ , ಫಾ.ಅನಿಲ್ ಪ್ರಶಾಂತ್, ಸಿಸ್ಟರ್ ರೋಸಿಟಾ ಪತ್ರಕರ್ತ ಎಂ. ದಯಾನಂದ ಇದ್ದರು.
ಕ್ರಿಸ್ಮಸ್ ಹಬ್ಬದ ಅಂಗವಾಗಿ ಚರ್ಚ್ ನಲ್ಲಿ ಆಕರ್ಷಕ ಗೋದಲಿ ನಿರ್ಮಾಣ ಮಾಡಲಾಗಿತ್ತು.