ಸೋಲಾರ್‌ಗಳು ರೈತರ ಜಮೀನುಗಳನ್ನು ಕ್ರಮೇಣ ವ್ಯಾಪಿಸಿಕೊಳ್ಳುತ್ತಿವೆ.

ಕೂಡ್ಲಿಗಿ: ತಾಲೂಕಿನಲ್ಲಿ ಸೋಲಾರ್‌ಗಳು ರೈತರ ಜಮೀನುಗಳನ್ನು ಕ್ರಮೇಣ ವ್ಯಾಪಿಸಿಕೊಳ್ಳುತ್ತಿವೆ. ತಾಲೂಕಿನ ಹೊಸಹಟ್ಟಿಯ ರೈತ ಓಬಣ್ಣ ಅವರ 8 ಎಕರೆ ಜಮೀನಿನ ಪಕ್ಕ ಸೋಲಾರ್ ಪ್ಲಾಂಟ್ ಇರುವುದರಿಂದ ಅದರ ಉಷ್ಣತೆಗೆ ಓಬಣ್ಣ ಅವರ ಜಮೀನಿನಲ್ಲಿ ಬೆಳೆಯುವ ದಾಳಿಂಬೆ, ಪಪ್ಪಾಯಿ, ಅಡಿಕೆಯ ಹೂ-ಕಾಯಿಗಳು ನೆಲಕ್ಕುರುಳುತ್ತಿವೆ. ಇದರಿಂದ ಲಕ್ಷಗಟ್ಟಲೇ ನಷ್ಟ ಅನುಭವಿಸಿ ರೋಸಿ ಹೋದ ರೈತ ನ್ಯಾಯಾಲಯದ ಮೆಟ್ಟಿಲು ಹತ್ತರು ನಿರ್ಧರಿಸಿದ್ದಾನೆ.

ವಿಂಡ್ ಫ್ಯಾನ್ ಅವಾಂತರಗಳಿಂದ ಇಡೀ ಕೂಡ್ಲಿಗಿ ತಾಲೂಕಿನ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಪ್ರಾಣಿ- ಪಕ್ಷಿಗಳು ಕಡೆಗೆ ಮನುಷ್ಯನ ವಾಸಸ್ಥಾನದ ಪಕ್ಕದಲ್ಲಿಯೇ ವಿಂಡ್ ಫ್ಯಾನ್ ಅಬ್ಬರವಿದೆ. ಇದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇದರ ಬೆನ್ನಲ್ಲೇ ರೈತರ ಜಮೀನುಗಳನ್ನು ಲಕ್ಷಗಟ್ಟಲೇ ಲೀಜ್ ಪಡೆದು 25-30 ವರ್ಷಗಳವರೆಗೆ ಖಾಸಗಿ ಕಂಪನಿಗಳು ಸೋಲರ್ ಪ್ಲಾಂಟ್ ಅಳವಡಿಸುತ್ತಿವೆ. ಈ ಸೋಲಾರ್ ಪ್ಲಾಂಟ್ ಪಕ್ಕದ ಜಮೀನುಗಳು ಸರಿಯಾಗಿ ಫಲ ನೀಡುತ್ತಿಲ್ಲ ಎಂಬುದು ರೈತರ ಆರೋಪ.

ರೈತರ ಜಮೀನುಗಳನ್ನು ಖಾಸಗಿ ಕಂಪನಿಗಳು ಸುಪರ್ದಿಗೆ ಪಡೆದು ರೈತರನ್ನು ಕೂಲಿಕಾರ್ಮಿಕರನ್ನಾಗಿಸುವ ಹುನ್ನಾರ ನಡೆಯುತ್ತಿದೆ. ರೈತರ ಜಮೀನುಗಳಲ್ಲಿ ಖಾಸಗಿ ಕಂಪನಿಗಳ ದರ್ಬಾರ್ ನಡೆಯುತ್ತಿದೆ. ತಾಲೂಕಿನ ಗುಡೇಕೋಟೆ, ಹೊಸಹಳ್ಳಿ ಹೋಬಳಿಗಳಲ್ಲಂತೂ ಎಲ್ಲಿ ನೋಡಿದರೂ ಸೋಲಾರ್, ವಿಂಡ್ ಫ್ಯಾನ್‌ಗಳೇ ತುಂಬಿಕೊಂಡಿವೆ. ಸೋಲಾರ್ ನಿಂದ ಏನೂ ತೊಂದರೆಯಾಗುವುದಿಲ್ಲ ಎಂದುಕೊಂಡಿದ್ದ ರೈತರಿಗೆ ಸೋಲಾರ್ ಶಾಕ್ ನೀಡಿದೆ.

ನಮ್ಮ ಜಮೀನಿನ ಪಕ್ಕದಲ್ಲಿ ಖಾಸಗಿ ಕಂಪನಿಯೊಂದು ಸೋಲಾರ್ ವಿದ್ಯುತ್ ತಯಾರಿಕಾ ಘಟಕ ಸ್ಥಾಪಿಸಿದೆ. ಸೋಲಾರ್ ಉಷ್ಣಕ್ಕೆ ಪಕ್ಕದ ನಮ್ಮ ಜಮೀನಿನಲ್ಲಿ ಪಪ್ಪಾಯಿ, ದಾಳಿಂಬೆಯ ಮೊಗ್ಗು, ಸಣ್ಣಕಾಯಿಗಳು ಉದುರುತ್ತಿವೆ. ಎಲೆ ಬಳ್ಳಿ ಬೆಳೆಯುತ್ತಿಲ್ಲ ಬದಲಾಗಿ ಮುಟುರಾಗುತ್ತಿದೆ. ಸೋಲಾರ್ ಕಂಪನಿ ಸ್ಪಂದಿಸುತ್ತಿಲ್ಲ. ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. -ಓಬಣ್ಣ, ಹೊಸಹಟ್ಟಿಯ ರೈತ.