ಅಂದಿನ ಮಹಾಭಾರತದಲ್ಲಿ ನಡೆದ ಸನ್ನಿವೇಶ, ಘಟನೆ, ಕಲಹ, ವಿನಾಶಕಾರಿ ಯುದ್ಧ, ದಾಯಾದಿ ಮತ್ಸರ, ದ್ವೇಷ ರಾಜಕಾರಣ, ಹೆಣ್ಣಿನ ಆಸ್ಮಿತೆಗಳು ಇಂದಿನ ಭಾರತದಲ್ಲಿಯ ಸಮಕಾಲಿನ ವಿಷಯಗಳು ಆಗಿವೆ.
ಧಾರವಾಡ:
ಕಂಪನಿ ರಂಗಭೂಮಿಗೆ ಹೊಂದುವಂತೆ ತಮ್ಮದೇ ವಿಶಿಷ್ಟ ಭಾಷಾಶೈಲಿ, ಸಂಭಾಷಣೆ ನವೀನತೆಯನ್ನು ಬಳಕೆ ಮಾಡಿ ನಾಟಕ ರಚಿಸುವುದರೊಂದಿಗೆ ನೋಡುಗರನ್ನು ಆಕರ್ಷಿಸಿಸುವ ಮೂಲಕ ಉತ್ತರ ಕರ್ನಾಟಕದ ಹೆಮ್ಮೆ ಹೆಚ್ಚಿಸಿದವರು ಕಂದಗಲ್ಲ ಹನುಮಂತರಾಯರು ಎಂದು ಹಿರಿಯ ಚಿಂತಕ ಡಾ. ರೆಹಮತ್ ತರಿಕೆರೆ ಹೇಳಿದರು.ರಂಗಾಯಣವು ಸೃಜನಾ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ “ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ” ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಮಹಾಭಾರತದಲ್ಲಿ ನಡೆದ ಸನ್ನಿವೇಶ, ಘಟನೆ, ಕಲಹ, ವಿನಾಶಕಾರಿ ಯುದ್ಧ, ದಾಯಾದಿ ಮತ್ಸರ, ದ್ವೇಷ ರಾಜಕಾರಣ, ಹೆಣ್ಣಿನ ಆಸ್ಮಿತೆಗಳು ಇಂದಿನ ಭಾರತದಲ್ಲಿಯ ಸಮಕಾಲಿನ ವಿಷಯಗಳು ಆಗಿವೆ. ಇಂತಹ ಮಹಾಭಾರತ ಕಥೆ ಆಧರಿಸಿ ಕಂದಗಲ್ಲರು ರಚಿಸಿದ ಏಳು ನಾಟಕಗಳಲ್ಲಿಯ ಪ್ರಮುಖ ಅಂಶಗಳನ್ನು ಜೋಡಣೆ ಮಾಡಿ ಧಾರವಾಡ ರಂಗಾಯಣವು ಅದ್ಭುತ ನಾಟಕವನ್ನು ರಚಿಸಿರುವುದು ರಂಗಭೂಮಿಯ ಬೆಳವಣಿಗೆಯಲ್ಲಿ ಒಂದು ಛಾಪು ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.ರಂಗಸಮಾಜ ಸದಸ್ಯರಾದ ಶಶಿಧರ ಬಾರಿಘಾಟ್ ಹಾಗೂ ಮಹಾಂತೇಶ ಗಜೇಂದ್ರಗಡ, ಸಾಹಿತಿ ಪ್ರೊ. ಎಚ್.ಆರ್. ಅಮರನಾಥ, ಕಂದಗಲ್ಲ ಹನುಮಂತರಾಯ ಮನೆತನದವರಾದ ರಾಘವೇಂದ್ರ ಕಾರಕೂನ ಇದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ನಂತರ ಪ್ರಕಾಶ ಗರುಡ ರಂಗರೂಪ ನಿರ್ದೇಶಿಸಿ, ರಾಘವ ಕಮ್ಮಾರ ಸಂಗೀತ ಸಂಯೋಜಿಸಿದ “ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ” ನಾಟಕವನ್ನು ರಂಗಾಯಣ ರೆಪರ್ಟರಿ ಕಲಾವಿದರು ಅದ್ಭುತವಾಗಿ ಪ್ರದರ್ಶನ ಮಾಡಿದರು.