ಶಿರಹಟ್ಟಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ವಾಜಪೇಯಿ ಅವರ ೧೦೧ನೇ ಜನ್ಮದಿನಾಚರಣೆ ನಿಮಿತ್ತ ಗುರುವಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಶಿರಹಟ್ಟಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾರ್ಯಕರ್ತರ ಮೇಲೆ ಸದಾ ನಂಬಿಕೆ ಇಟ್ಟು ಕಾರ್ಯಕರ್ತರೇ ಪಕ್ಷದ ಜೀವಾಳ ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದವರು. ವಾಜಪೇಯಿ ಅವರ ಹೃದಯ ಕಾರ್ಯಕರ್ತರ ಸಂಕಷ್ಟಕ್ಕೆ ಮಿಡಿಯುತ್ತಿತ್ತು ಎಂದು ಬಿಜೆಪಿ ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.
ಗುರುವಾರ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ವಾಜಪೇಯಿ ಅವರ ೧೦೧ನೇ ಜನ್ಮದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಬದುಕು ಕಳೆದಿರುವ ಅವರು ಲೋಕಸಭೆಗೆ ಒಂಬತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆಯೇ ಸರಿ ಎಂದರು.ಜನಸಂಘದ ಕಾಲದಿಂದಲೂ ರಾಜಕೀಯದಲ್ಲಿದ್ದು, ಸಾರ್ವಜನಿಕವಾಗಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ಸೇವೆ ಸಲ್ಲಿಸಿ ಜನಮಾನಸದಲ್ಲಿ ನೆನಪಾಗಿರುವ ದೇಶಕಂಡ ಧೀಮಂತ ನಾಯಕ. ಅತಿ ಸರಳ ಸಜ್ಜನ ರಾಜಕಾರಣಿಯಾಗಿದ್ದ ವಾಜಪೇಯಿ ಅವರು ಪತ್ರಕರ್ತರು, ಕವಿಗಳೂ ಆಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಉತ್ತಮ ಆಡಳಿತಗಾರರು ಮತ್ತು ಅಜಾತಶತ್ರು. ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿಬದ್ಧರಾದವರು ಎಂದರು.
ಜಿಲ್ಲಾ ಬಿಜೆಪಿ ಮುಖಂಡ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ೨೬ ಪಕ್ಷಗಳ ಮೈತ್ರಿಕೂಟ ಎನ್‌ಡಿಎಯನ್ನು ಯಶಸ್ವಿಯಾಗಿ ಮುನ್ನಡೆಸಿದ ಅಜಾತಶತ್ರು ವಾಜಪೇಯಿ ಎಂದರು. ನಂದಾ ಪಲ್ಲೇದ, ರಾಮಣ್ಣ ಕಂಬಳಿ, ಬಸವರಾಜ ವಡವಿ, ಸಂತೋಷ ತೊಡೆಕಾರ್, ಮಲ್ಲು ಕಬಾಡಿ, ಜಗದೀಶ ತೇಲಿ, ಪರಶುರಾಮ್ ಡೊಂಕಬಳ್ಳಿ, ವಿನೋದ ಕಪ್ಪತ್ತನವರ, ಮಹೇಶ ಕಲ್ಲಪ್ಪನವರ, ಪ್ರಕಾಶ ಬಾರಬರ್, ಪ್ರಕಾಶ ಶೇಳಕೆ, ವೀರು ಪಾಟೀಲ, ಶಾಂತವೀರಯ್ಯ ಮಠಪತಿ, ಅಕಬರ ಯಾದಗಿರಿ, ಮಂಜು ಸೊಂಟನೂರ್, ಈರಪ್ಪ ಯಾತಗಿರಿ ಇತರರು ಇದ್ದರು.