17ರಂದು ವಿಶ್ವಕರ್ಮ ಜಯಂತಿ: ಎಸಿ ಎಂ.ಕಾರ್ತಿಕ್

| Published : Sep 06 2024, 01:05 AM IST

ಸಾರಾಂಶ

ವಿಶ್ವಕರ್ಮ ಜಯಂತಿಯನ್ನು ಹಬ್ಬದ ರೀತಿ ಆಚರಿಸಲಾಗುವುದು. ಸರ್ಕಾರದ ಶಿಷ್ಠಾಚಾರದ ಅನುಸಾರ ಆಹ್ವಾನ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಸೆ.17ರಂದು ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಜಯಂತಿಯನ್ನು ಹಬ್ಬದ ರೀತಿ ಆಚರಿಸಲಾಗುವುದು. ಸರ್ಕಾರದ ಶಿಷ್ಠಾಚಾರದ ಅನುಸಾರ ಆಹ್ವಾನ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಹೇಳಿದರು.

ಸರ್ಕಾರ ನೀಡುವ ಅನುದಾನದಲ್ಲಿ ಆಹ್ವಾನ ಪತ್ರಿಕೆ, ವೇದಿಕೆ ಅಲಂಕಾರ, ಉಪನ್ಯಾಸ ಕಾರ್ಯಕ್ರಮ, ವಿಶ್ವಕರ್ಮ ಸಮುದಾಯ ಓರ್ವ ಹಿರಿಯ ಕಲಾವಿದರಿಗೆ ಸಂಗೀತ ಕಾರ್ಯಕ್ರಮದ ವೆಚ್ಚ ಒದಗಿಸಲಾಗುವುದು. ಮೆರವಣಿಗೆ 2 ಜನಪದ ಕಲಾ ತಂಡಗಳನ್ನು ಇಲಾಖೆಯಿಂದ ನಿಯೋಜನೆಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದರು.ಭಗವಾನ್ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಲು ಶಿಕ್ಷಕ ರಾಘವೇಂದ್ರ ಆಚಾರ್ ಅವರನ್ನು ಆಹ್ವಾನಿಸುವಂತೆ ಉಪವಿಭಾಗಧಿಕಾರಿಗಳಲ್ಲಿ ಸಮುದಾಯ ಮುಖಂಡರು ಮನವಿ ಮಾಡಿಕೊಂಡರು. ಸಮುದಾಯದಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾಧನೆ ತೋರಿದ ಸಾಧಕರಿಗೆ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಸನ್ಮಾನಿಸಲು ತೀರ್ಮಾನಿಸಲಾಯಿತು. ಜಯಂತಿ ಅಂಗವಾಗಿ ಸೆ.17 ರಂದು ನಗರದ ಬುರಜಹಟ್ಟಿ ಆಂಜನೇಯ ದೇವಸ್ಥಾನದಿಂದ ತರಾಸು ರಂಗ ಮಂದಿರದವರೆಗೆ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ಬೆಳಗ್ಗೆ 10.30ಕ್ಕೆ ಮೆರವಣಿಗೆ ಚಾಲನೆ ನೀಡಲಾಗುವುದು. ನಾದಸ್ವರ ಡೊಳ್ಳು ಸೇರಿದಂತೆ ವಿವಿಧ ಜನಾಪದ ಕಲಾತಂಡಗಳು ಭಾಗವಹಿಸುವವು. ಮಧ್ಯಾಹ್ನ 11.30 ಗಂಟೆಗೆ ತರಾಸು ರಂಗಮಂದಿರಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.

ಸಭೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಉಪನಿರ್ದೇಶಕ ಮಂಜುನಾಥ, ವಿಶ್ವಕರ್ಮ ಸಮಾಜದ ಮುಖಂಡರಾದ ಸುರೇಶ್ ಆಚಾರಿ, ಕೆ.ಮಲ್ಲಿಕಾರ್ಜುನ್, ಸುರೇಶ್, ಕೃಷ್ಣಾಚಾರ್, ಗೋವಿಂದ್, ಹೆಚ್.ಪಿ.ರಾಜೇಂದ್ರ, ಕೆ.ಶಿವಣ್ಣಾಚಾರ್ ಇದ್ದರು.