ಪ್ರಹ್ಲಾದರೆಡ್ಡಿ ಮಾದಿನಾಳ ಕನಕಗಿರಿ
ಹಳೆಯ ಶಿಲಾಯುಗದಲ್ಲಿ ಆಹಾರ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡ ಮನುಷ್ಯ ನೂತನ ಶಿಲಾಯುಗದ ಕಾಲದಲ್ಲಿ ಆಹಾರ ಉತ್ಪಾದನೆಗಾಗಿ ಕೃಷಿ ಜತೆಗೆ ಪಶು ಸಂಗೋಪನೆಗೂ ಒತ್ತು ನೀಡಿದ್ದ ಎನ್ನುವ ಐತಿಹ್ಯ ಕುರುಹುವುಳ್ಳ ನೆಲೆಗಳು ಸಮೀಪದ ವಿಠಲಾಪುರ ಹಾಗೂ ತಾಲೂಕಿನ ರಾಮದುರ್ಗದಲ್ಲಿದ್ದು, ಸಾಕು ಪ್ರಾಣಿಗಳ ಸಗಣಿ ಸುಟ್ಟಿದ್ದರಿಂದ ಉಂಟಾದ ಬೃಹತ್ ಬೂದಿ ದಿಬ್ಬಗಳು, ಪಳೆಯುಳಿಕೆ ಸಾಕ್ಷಿಯಾಗಿದ್ದು, ಹೆಚ್ಚಿನ ಸಂಶೋಧನೆಗಾಗಿ ಕಾಯುತ್ತಿವೆ.ಆದಿ ಶಿಲಾಯುಗ, ಮಧ್ಯ ಶಿಲಾಯುಗ, ನವ ಶಿಲಾಯುಗ, ಶಿಲಾ ತಾಮ್ರಯುಗ ಹಾಗೂ ಕಬ್ಬಿಣದ ಬೃಹತ್ ಶಿಲಾಯುಗವೆಂದು ಮಾನವನ ಆರಂಭಿಕ ಜೀವನ ವಿಂಗಡಿಸಲಾಗಿದೆ. ಈ ಪ್ರತಿಯೊಂದು ಕಾಲಘಟ್ಟದಲ್ಲಿ ಮಾನವರು ಹೊಸ ಹೊಸ ಅವಿಷ್ಕಾರದಿಂದ ತಮ್ಮ ದೈನಂದಿನ ಜೀವನ ಸರಳವಾಗಿಸಿಕೊಂಡಿದ್ದಾನೆ.
ನವ ಶಿಲಾಯುಗದಲ್ಲಿ ಮಾನವ ಅತೀ ಹೆಚ್ಚು ಪ್ರಗತಿ ಸಾಧಿಸಿ ನವ ಮಾನವ ಜೀವನ ರೂಪಿಸಿಕೊಂಡ ಉಪಕರಣಗಳ ಬಳಕೆ, ಮಣ್ಣಿನ ಪಾತ್ರೆಗಳ ತಯಾರಿಕೆ ಮತ್ತು ಉಪಯೋಗ, ಆಹಾರ ಉತ್ಪಾದನೆಗಾಗಿ ಒಕ್ಕಲುತನ ಆರಂಭಿಸಿದ್ದಲ್ಲದೇ, ಪಶುಪಾಲನೆ ಮಾಡಿದ್ದಾರೆ. ಇದರಿಂದ ಅಲೆಮಾರಿತನ ಬಿಟ್ಟು ಮನುಷ್ಯ ಒಂದೆಡೆ ನೆಲೆ ನಿಲ್ಲುವಂತಾಗಿ ಗ್ರಾಮೀಣ ಜನಜೀವನ ಹುಟ್ಟಿಕೊಂಡಿದೆ. ಇವುಗಳ ಕಾಲಮಾನ ಸುಮಾರು ಕ್ರಿಪೂ ೨೦೦೦-೬೦೦ರ ವರೆಗೆ ಇರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ. ಇಂಥ ನೆಲೆಗಳು ಸಮೀಪದ ವಿಠಲಾಪುರ ಹಾಗೂ ತಾಲೂಕಿನ ರಾಮದುರ್ಗದಲ್ಲಿದ್ದು, ಪ್ರಪಂಚಕ್ಕೆ ಪರಿಚಯವಿಲ್ಲದಂತಾಗಿರುವುದು ವಿಪರ್ಯಾಸವೇ ಸರಿ.ಪಶುಪಾಲನೆಗೆ ಬೂದಿ ದಿಬ್ಬಗಳು ಸಾಕ್ಷಿ: ಈ ಕಾಲದ ಮಾನವರು ಸಾಕುತ್ತಿದ್ದ ನೂರಾರು ಸಂಖ್ಯೆಯ ಪಶುಗಳ ಸಗಣಿ ಒಂದೆಡೆ ಸಂಗ್ರಹಿಸುತ್ತಿದ್ದರು. ಅಲ್ಲಿಂದ ತೆರಳುವಾಗ ಇತರೇ ವಸ್ತುಗಳನ್ನು ಹಾಕಿ ಈ ಸಗಣಿಯ ದಿಬ್ಬ ಸುಡುತ್ತಿದ್ದರು. ಇದರಿಂದ ನಿರ್ಮಿತವಾದವುಗಳೇ ಈ ಬೂದಿ ದಿಬ್ಬಗಳು ಎನ್ನುವುದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಇವುಗಳೇ ನೂತನ ಶಿಲಾಯುಗದ ಅವಿಭಾಜ್ಯ ಅಂಗವಾಗಿದ್ದು, ಭೀಮಾ-ಕೃಷ್ಣಾ-ತುಂಗಭದ್ರಾ ಸಂಗಮ ಪ್ರದೇಶ (ನೆರೆಯ ಆಂಧ್ರಪ್ರದೇಶ) ಭಾಗಗಳು ಸೇರಿ ಹಲವೆಡೆ ಇವು ಕಂಡು ಬರುತ್ತವೆ. ಅದರಂತೆ ಸಮೀಪದ ವಿಠಲಾಪುರದ ಬೂದಿ ದಿಬ್ಬವು ಬೆಟ್ಟದ ಇಳಿಜಾರು ಪ್ರದೇಶದಲ್ಲಿದೆ. ಇದು ಸುಮಾರು ೩ ರಿಂದ ೪ ಎಕರೆಗೂ ಹೆಚ್ಚಿನ ಪ್ರದೇಶ ವಿಸ್ತರಿಸಿಕೊಂಡಿದೆ. ಭೂಮಿಯಿಂದ ಸುಮಾರು ೨೦ ಅಡಿಗೂ ಹೆಚ್ಚು ಎತ್ತರವಿದ್ದು, ಸ್ಥಳೀಯರು ಅಲ್ಲಲ್ಲಿ ಮಣ್ಣನ್ನು ಅಗೆದು ಮನೆಗಳನ್ನು ಮೆತ್ತಲಿಕ್ಕೆ ಸಾಗಿಸಿದ್ದಾರೆ. ಪ್ರಸ್ತುತ ಬಹುತೇಕ ಪ್ರದೇಶವೂ ಅರಣ್ಯ ಇಲಾಖೆಗೆ ಒಳಪಟ್ಟಿದ್ದರಿಂದ ಗಿಡ ನೆಡಲು ಗುಂಡಿ ತೋಡಿ ಕೈ ಬಿಟ್ಟಿದ್ದಾರೆ. ಇಲ್ಲಿನ ಕಿಟ್ಟಗಳು ಸುಣ್ಣದ ಕಲ್ಲಿನ ರೀತಿಯಿದ್ದರೂ ಅತೀ ಕಡಿಮೆ ಭಾರ ಹೊಂದಿವೆ. ಇಲ್ಲಿ ಬೂದಿಯಾಕಾರದ ಮಣ್ಣನ್ನು ಕಾಣಬಹುದಾಗಿದೆ. ದಿಬ್ಬದೊಳಗೆ ಅನೇಕ ಅವಶೇಷ, ಬಳಕೆ ವಸ್ತುಗಳು ಇವೆ ಎನ್ನುವುದು ತಜ್ಞರ ಅಭಿಪ್ರಾಯ. ರಾಮದುರ್ಗ ಗ್ರಾಮದಲ್ಲಿನ ಬೂದಿ ದಿಬ್ಬ ಸುಮಾರು ಅರ್ಧ ಎಕರೆಯಷ್ಟಿದ್ದು, ನವ ಗ್ರಾಮದಲ್ಲಿದೆ. ಇದರ ಮೇಲೆ ಆಂಜನೇಯ ದೇವರ ಮೂರ್ತಿಯನ್ನಿಟ್ಟು ಆರಾಧಿಸಲಾಗುತ್ತಿದ್ದು, ಇದನ್ನು ಬೂದಿ ದಿಬ್ಬದ ಹನುಮಂತ ಎಂದು ಕರೆಯಲಾಗುತ್ತಿದೆ.
ಮೇಲ್ಮೆಯಲ್ಲೆ ಅಸ್ಥಿ, ಮಡಿಕೆ ಚೂರುಗಳು: ವಿಠಲಾಪುರದ ಬೂದಿ ದಿಬ್ಬ ಹಾಗೂ ಅದಕ್ಕೆ ಹೊಂದಿಕೊಂಡ ಸುಮಾರು ಮರ‍್ನಾಲ್ಕು ಎಕರೆಯಷ್ಟು ಮಣ್ಣಿಗಾಗಿ ಅಗೆಯಲಾದಲ್ಲಿ ಕಟ್ಟಡ ರಚನೆ, ಮಡಕೆ, ಅದರೊಳಗೆ ಮೂಳೆಗಳಿರುವುದು ಅಲ್ಲಿ ಕಾಲಿಟ್ಟವರಿಗೆ ಕಣ್ಣಿಗೆ ಕಾಣುತ್ತವೆ. ಎಲ್ಲೆಲ್ಲಿ ಅಗೆಯಲಾಗಿದೆಯೋ ಅಲ್ಲಲ್ಲಿ ಅಸ್ಥಿ, ಇಲ್ಲವೇ ಮಣ್ಣಿನ ಮಡಕೆ, ಊಟದ ತಟ್ಟೆ, ಮಡಕೆ ಚೂರು ಇನ್ನೂ ಮುಂತಾದ ಅವಶೇಷಗಳಿವೆ. ಇಲ್ಲಿ ಇಷ್ಟೊಂದು ಕುರುಹುಗಳು ದೊರೆಯುತ್ತಿದ್ದು, ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ, ಲಕ್ಕುಂಡಿಯಲ್ಲಿ ನಡೆದ ಸಂಶೋಧನೆಯಂತೆ ಈ ನೆಲೆಯಲ್ಲಿ ನಡೆದರೆ ಮತ್ತಷ್ಟು ಕುರುಹು ಮಾನವನ ಇತಿಹಾಸ ಹೊರ ಬರಲಿದೆ.
ಶಿಲಾ ಸಮಾಧಿಗಳ ಕೇಂದ್ರ ಸ್ಥಾನ: ಸತ್ತವರನ್ನು ಗೌರವಿಸುವ ಸಲುವಾಗಿ ಅಂದು ಕಲ್ಲಿನ ಗುಂಡುಗಳನ್ನು ಶವ ಸಂಸ್ಕಾರ ಮಾಡಿದ ಸ್ಥಳದ ಸುತ್ತಲೂ ಇರಿಸಿರುವುದು ಕಂಡು ಬರುತ್ತಿವೆ. ಇವು ವಿಠಲಾಪೂರದ ಬೂದಿ ದಿಬ್ಬಗಳಿರುವ ಪ್ರದೇಶದುದ್ದಕ್ಕೂ ಇವೆ. ಕೆಲ ಕಡೆಗಳಲ್ಲಿ ದೊಡ್ಡ ಗುಂಡು ಇರಿಸಿದರೆ ಇನ್ನೂ ಕೆಲ ಸಣ್ಣ ಗುಂಡುಗಳನ್ನು ಉಪಯೋಗಿಸಿರುವುದನ್ನು ಕಾಣಬಹುದಾಗಿದೆ.
ವಿಠಲಾಪುರದ ಬೂದಿದಿಬ್ಬದಲ್ಲಿ ದೊರೆತ ಸ್ಮಾರಕಗಳು ನವಶಿಲಾಯುಗದ ಲಕ್ಷಣ ಒಳಗೊಂಡಿದೆ. ಈ ಬೂದಿ ದಿಬ್ಬದಲ್ಲಿನ ಅನೇಕ ಅವಶೇಷ ನಾಶವಾಗಿವೆ. ಈ ಪ್ರಾಗೈತಿಹಾಸ ನೆಲೆ ಇನ್ನಷ್ಟು ಅಧ್ಯಯನಕ್ಕೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಕನಕಗಿರಿ ಸಂಶೋಧಕಿ ಡಾ.ಗೀತಾ ಪಾಟೀಲ್ ತಿಳಿಸಿದ್ದಾರೆ.ವಿಠಲಾಪುರ, ರಾಮದುರ್ಗ ಹಾಗೂ ಹಿರೇ ಬೆಣಕಲ್‌ನಲ್ಲಿ ಇಂಥ ಬೂದಿ ದಿಬ್ಬಗಳಿವೆ. ವಿಠಲಾಪುರದಲ್ಲಿ ಸಂಶೋಧನೆಗೆ ವಿಫುಲ ಅವಕಾಶಗಳಿದ್ದು, ಪ್ರಾಚ್ಯವಸ್ತು ಇಲಾಖೆ ಸಂಶೋಧನೆಗೆ ಮುಂದಾಗಬೇಕು ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.
ಮುಂದಿನ ವಾರವೇ ವಿಠಲಾಪುರ ಹಾಗೂ ರಾಮದುರ್ಗದಲ್ಲಿನ ಬೂದಿ ದಿಬ್ಬ ಹಾಗೂ ಆದಿ ಮಾನವರ ನೆಲೆಗಳನ್ನು ಸ್ಥಳ ಪರಿಶೀಲನೆ ಮಾಡಲಾಗುವುದು ಎಂದು ಕಮಲಾಪುರ ಪ್ರಾಚ್ಯವಸ್ತು ಇಲಾಖೆ ಸಹಾಯಕ ನಿರ್ದೇಶಕ ಶೇಜೇಶ್ವರ ತಿಳಿಸಿದ್ದಾರೆ.