ಮಹಿಳೆಯರ ಕಣ್ಣೀರು ಒರೆಸಿದ ಕಾಂಗ್ರೆಸ್‌ಗೆ ಮತ ನೀಡಿ

| Published : Apr 25 2024, 01:02 AM IST

ಮಹಿಳೆಯರ ಕಣ್ಣೀರು ಒರೆಸಿದ ಕಾಂಗ್ರೆಸ್‌ಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದು, ಮಹಿಳೆಯರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ಮತ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಮಹಿಳೆಯರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದು, ಮಹಿಳೆಯರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ಮತ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು.

ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದ ಕಣಗಲಾ, ಸಂಕೇಶ್ವರ, ಅಮ್ಮಣ್ಣಗಿಯಲ್ಲಿ ಕೈಗೊಂಡ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಾತ್ರ ದೊಡ್ಡದಿದ್ದು, ಕಾಂಗ್ರೆಸ್‌ ಪಕ್ಷ ಪುರುಷರಿಗೆ ಮಾತ್ರವಲ್ಲದೇ ಮಹಿಳೆಯರಿಗೂ ಟಿಕೆಟ್‌ ನೀಡಿ ಮಹಿಳೆಯರ ಪರವಾಗಿ ನಿಂತಿದೆ. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಮತದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ನನಗೆ ಆಶೀರ್ವಾದ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಡವರು ಸ್ವಾಭಿಮಾನದಿಂದ ಬದುಕು ನಡೆಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳು ಬಡವರ ಬದುಕಿಗೆ ನೆಮ್ಮದಿಯನ್ನು ತಂದಿದೆ. ಸಂವಿಧಾನದ ಆಶಯಗಳು ಜಾರಿಯಾಗಬೇಕಾದರೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಪಕ್ಷ ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಪರವಾಗಿ ಇದೆ. ಆದರೆ, ಬಿಜೆಪಿಗೆ ಸಂವಿಧಾನದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.

ರಾಜಕಾರಣದ ಮೂಲಕ ಸಮಾಜ ಸೇವೆ ಮಾಡುವುದರ ಜೊತೆಗೆ ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯಲು ಬಯಸುವ ಯುವಕರಿಗೆ ತಮ್ಮ ಫೌಂಡೇಶನ್‌ ಮೂಲಕ ಸಹಾಯ ಸಹಕಾರ ನೀಡುವ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ನನಗೆ ಆದರ್ಶ. ಅವರ ದಾರಿಯಲ್ಲೇ ನಡೆದು ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮ ಮನೆಯ ಮಗಳಾದ ನನಗೂ ಸಹ ನಮ್ಮ ತಂದೆಯವರಿಗೆ ನೀಡಿದ ಬೆಂಬಲ, ಅಭಿಮಾನವನ್ನು ನೀಡಿ ಎಂದ ಅವರು, ಕಳೆದ 15 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ತಂದೆ ಸತೀಶ ಜಾರಕಿಹೊಳಿ ಅವರು ತಮ್ಮ ಮತಕ್ಷೇತ್ರದ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ನನಗೂ ಇದೇ ರೀತಿಯಲ್ಲಿ ಜನರ ಸೇವೆ ಮಾಡುವ ಬಯಕೆಯಿದೆ. ಆದ್ದರಿಂದ ಮತದಾರರು ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ 9 ತಿಂಗಳೊಳಗೆ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಪ್ರತಿಯೊಂದು ಕುಟುಂಬಗಳಿಗೆ 4 ರಿಂದ 5 ಸಾವಿರ ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಂದು ಮನೆಯ ಗೃಹಿಣಿಯರು ₹2000 ಪಡೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ 5 ಕೆಜಿಗೆ ಹಣವನ್ನು ಪಡೆಯುತ್ತಿದ್ದಾರೆ. ಈ ಬಾರಿ ಕ್ಚೇತ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೇ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಕಾರ್ಯಕರ್ತರ ಕಷ್ಟ ಸುಃಖಗಳಿಗೆ ಸದಾ ಭಾಗಿಯಾಗುವೆ. ಕಚೇರಿ ಹಂತದಲ್ಲಿ ಸಾರ್ವಜನಿಕರ ಕೆಲಸಗಳು ಸುಲಭವಾಗಿ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಭ್ರಷ್ಟಾಚಾರ ಮುಕ್ತ ತಾಲೂಕಾಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಗ್ರಾಮಗಳಿಗೆ ಆಗಮಿಸಿದ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಮಹಿಳೆಯರು ಆರತಿ ಎತ್ತಿ, ಹೂ ಮಾಲೆ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮುಖಂಡರಾದ ಜಯಪ್ರಕಾಶ ಕರಜಗಿ, ವಿನೋದ ನಾಯಿಕ, ದಿಲೀಪ್ ಹೊಸಮನಿ, ಚಿದಾನಂದ ಕರ್ದನ್ನವರ, ಪ್ರವೀಣ ನೇಸರಿ, ವಿಕ್ರಮ್ ಕರನಿಂಗ ತಬ್ರೇಜ್ ಹಜರತಭಾಯ್ ಮುಕ್ತಾರ್ ನದಾಫ್, ಮಹೇಶ ದವಡೆ, ಪ್ರಶಾಂತ ಕೋಳಿ, ಮಹೇಶ ಹೊಟ್ಟಿವಳಿ, ನಾರಾಯಣ ಕದಂ, ಕುಮಾರ ಕಬ್ಬೂರಿ, ರಿಜ್ವಾನ್ ರಾಂಪುರೆ ಮುಸ್ತಫಾ ಮಕಾಂದರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರ ಹಿಡಿದವರು. ಇಲ್ಲಿಯ ತನಕ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಬಿಜೆಪಿಯ ಸುಳ್ಳು ಭರವಸೆಗಳಿಗೆ ನಂಬಿ ಮತ ಹಾಕದೆ ನುಡಿದಂತೆ ನಡೆದ ಕಾಂಗ್ರೆಸ್‌ ಬೆಂಬಲಿಸಬೇಕು.

-ಪ್ರಿಯಂಕಾ ಜಾರಕಿಹೊಳಿ,

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ.