ಪ್ರಜಾಪ್ರಭುತ್ವ ಹಾಗೂ ಸದೃಢ ಭಾರತ ನಿರ್ಮಾಣದಲ್ಲಿ ದೇಶದ ಯುವಕರ ಪಾತ್ರ ಮಹತ್ತರವಾದದ್ದು, 18 ವರ್ಷ ತುಂಬಿದ ಯುವಕ ಯುವತಿಯರು ತಪ್ಪದೆ ಮತದಾರರಾಗಿ ನೋಂದಾಯಿಸಿಕೊಳ್ಳಿ.

ಕನ್ನಡಪ್ರಭವಾರ್ತೆ ಬಾಗೇಪಲ್ಲಿ

ಯಾವುದೇ ಕಾರಣಕ್ಕೂ ಹಣ ಸೇರಿ ಆಸೆ ಆಮಿಷಗಳಿಗೆ ಬಲಿಯಾಗದೆ ನೈತಿಕವಾಗಿ, ಜವಾಬ್ದಾರಿಯುತವಾಗಿ ಅರ್ಹ ಮತದಾರರು ಮತ ಚಲಾಯಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಮಂಜುನಾಥಚಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಪಂ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಪಟ್ಟಣದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ 324ನೇ ವಿಧಿಯನ್ವಯ ಸ್ಥಾಪಿತವಾದ ರಾಷ್ಟ್ರೀಯ ಚುನಾವಣಾ ಆಯೋಗದ ಅಂಗವಾಗಿ ಪ್ರತಿ ವರ್ಷ ಜ.25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುವುದು. ಮತದಾನದ ಮಹತ್ವ, ಮತದಾರರ ಹಕ್ಕು, ಚುನಾವಣೆ ಪ್ರಕ್ರಿಯೆ ಇತ್ಯಾದಿಗಳ ಕುರಿತು ಜಾಗೃತಿ ಮೂಡಿಸುವುದೇ ಮತದಾರರ ದಿನಾಚರಣೆ ಮುಖ್ಯ ಉದ್ದೇಶ ಎಂದು ಹೇಳಿದರು.

ತಹಸೀಲ್ದಾರ್ ಮನೀಷಾ ಎನ್. ಪತ್ರಿ ಮಾತನಾಡಿ, ಪ್ರಜಾಪ್ರಭುತ್ವ ಹಾಗೂ ಸದೃಢ ಭಾರತ ನಿರ್ಮಾಣದಲ್ಲಿ ದೇಶದ ಯುವಕರ ಪಾತ್ರ ಮಹತ್ತರವಾದದ್ದು, 18 ವರ್ಷ ತುಂಬಿದ ಯುವಕ ಯುವತಿಯರು ತಪ್ಪದೆ ಮತದಾರರಾಗಿ ನೋಂದಾಯಿಸಿಕೊಳ್ಳಿ. ಇದು ನಿಮ್ಮ ಹಕ್ಕು. ನೋಂದಣಿ ಮಾಡಿಕೊಳ್ಳಲು ವಿಶೇಷ ಅಭಿಯಾನಗಳೊಂದಿಗೆ ಅನ್‌ಲೈನ್ ನೋಂದಣಿಗೂ ಅವಕಾಶವಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ಇದೇ ವೇಳೆ ಹಿರಿಯ ವಕೀಲರಾದ ಎ.ಜಿ. ಸುಧಾಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಜಯ್ ಸಾರಥಿ, ಕಾಲೇಜಿನ ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ವಕೀಲರಾದ ಬಾಲುನಾಯಕ್, ನಾಗಭೂಷಣ್, ಸಿ.ರವಿ, ಪಿ.ವಿ.ವೆಂಕಟರವಣಪ್ಪ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.