ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ವ್ಯಾಸಂಗಕ್ಕಾಗಿ ಬಂದು ಬಾಗಲಕೋಟೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ವಿದ್ಯಾರ್ಥಿಗಳ ಕಾನೂನುಬಾಹಿರವಾಗಿ ಹೆಸರುಗಳನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ವ್ಯಾಸಂಗಕ್ಕಾಗಿ ಬಂದು ಬಾಗಲಕೋಟೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ವಿದ್ಯಾರ್ಥಿಗಳ ಕಾನೂನುಬಾಹಿರವಾಗಿ ಹೆಸರುಗಳನ್ನು ಮತದಾರರ ಯಾದಿಗೆ ಸೇರಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮುಖಂಡರು, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಯಾದಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ, ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ವೈದ್ಯಕೀಯ ಇಂಜಿನಿಯರಿಂಗ್, ನರ್ಸಿಂಗ್ ವ್ಯಾಸಂಗಕ್ಕಾಗಿ ಬಂದು ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ವಿದ್ಯಾರ್ಥಿಗಳ ಹೆಸರುಗಳನ್ನು ಕಾನೂನು ಮತ್ತು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಮತದಾರರ ಯಾದಿಗೆ ಸೇರಿಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಲಭ್ಯವಾಗುತ್ತಿದೆ ಎಂದು ಆರೋಪಿಸಿದರು.
ತಾತ್ಕಾಲಿಕ ವಾಸಸ್ಥಳ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೂಲ ಮತಕ್ಷೇತ್ರದಲ್ಲಿಯೇ ಮತದಾರರಾಗಿ ನೋಂದಾಯಿತರಾಗಿರಬೇಕು ಎಂಬುದು ಚುನಾವಣಾ ಕಾನೂನುಗಳ ಮೂಲ ತತ್ವವಾಗಿದೆ. ಈ ನಿಯಮ ಉಲ್ಲಂಘಿಸಿ ಸ್ಥಳೀಯ ಮತದಾರರ ಯಾದಿಯಲ್ಲಿ ಹೆಸರು ಸೇರಿಸುವುದು ಕೇವಲ ಅಕ್ರಮವಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಪಾವಿತ್ರ್ಯ ಹಾಳುಮಾಡುವ ಗಂಭೀರ ಅಪರಾಧವಾಗಿದೆ ಎಂದು ದೂರಿದರು.ಇಂತಹ ಕಾನೂನುಬಾಹಿರ ಹೆಸರು ಸೇರ್ಪಡೆ ಹಿಂದೆ ಸಂಘಟಿತ ಯತ್ನ, ರಾಜಕೀಯ ಒತ್ತಡ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯ ಇರುವ ಶಂಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ಅಕ್ರಮವನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಮೂಡುವ ಸಾಧ್ಯತೆ ಇದೆ. ಆದ್ದರಿಂದ, ಅಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಶ್ರೀಧರ ನೀಲನಾಯಕ, ಬ್ಲಾಕ್ ಅಧ್ಯಕ್ಷ ಸುನೀಲ ಬಾಲಗಾವಿ ಪದಾಧಿಕಾರಿಗಳಾದ ವಿಜಯ ಮುಳ್ಳೂರ ಪ್ರಭು ಹಳ್ಳೂರ, ಶಬಾಜಿ ಮಾಲಿನವನಿ, ಇಲಿಯಾಸ ಮದರಖಂಡಿ, ಬಂದೇನವಾಜ ಬದಾಮಿ ಉಪಸ್ಥಿತರಿದ್ದರು.