ಹಸ್ತಪ್ರತಿಗಳು ನಮ್ಮ ನಾಡಿನ ಆಸ್ತಿಯಾಗಿದ್ದು, ಸರಕಾರ ರಾಜ್ಯದ ಕಂದಾಯ ವಿಭಾಗಕ್ಕೊಂದು ಕರ್ನಾಟಕ ಹಸ್ತಪ್ರತಿ ಸಂಗ್ರಹಾಲಯ ಪ್ರಾರಂಭಿಸುವ ಜತೆಗೆ ರಾಜ್ಯ ಹಸ್ತಪ್ರತಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನಾಧ್ಯಕ್ಷ ಬೆಂಗಳೂರಿನ ಹಿರಿಯ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಸ್ತಪ್ರತಿಗಳು ನಮ್ಮ ನಾಡಿನ ಆಸ್ತಿಯಾಗಿದ್ದು, ಸರಕಾರ ರಾಜ್ಯದ ಕಂದಾಯ ವಿಭಾಗಕ್ಕೊಂದು ಕರ್ನಾಟಕ ಹಸ್ತಪ್ರತಿ ಸಂಗ್ರಹಾಲಯ ಪ್ರಾರಂಭಿಸುವ ಜತೆಗೆ ರಾಜ್ಯ ಹಸ್ತಪ್ರತಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನಾಧ್ಯಕ್ಷ ಬೆಂಗಳೂರಿನ ಹಿರಿಯ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ಬಾಗಲಕೋಟೆಯ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಸರ್ಕಾರ ಹಸ್ತಪ್ರತಿ ಸರ್ವೇಕ್ಷಣೆ, ಸಂಗ್ರಹಣೆ ಮತ್ತು ಸಂರಕ್ಷಣೆಗೆ ಮುಂದಾಗಬೇಕು, ಅನುದಾನರಹಿತ ಹಸ್ತಪ್ರತಿ ಭಂಡಾರಗಳಿಗೆ ಪ್ರತಿವರ್ಷ ಸಂಗ್ರಹ-ಸಂರಕ್ಷಣೆ- ಪೋಷಣೆ ಮತ್ತು ಪ್ರಕಟನೆಗಳಿಗೆ ಉದಾರವಾಗಿ ಪ್ರತಿವರ್ಷ ಅನುದಾನ ನೀಡಬೇಕು. ಇದು ಸರ್ಕಾರದ ವಾರ್ಷಿಕ ಆಯ-ವ್ಯಯದಲ್ಲಿ ಅಡಕವಾಗಬೇಕು, ಸರಕಾರ ರಾಜ್ಯದ ಐದು ಕಂದಾಯ ವಿಭಾಗಗಳಲ್ಲಿ ಕರ್ನಾಟಕ ಹಸ್ತಪ್ರತಿ ಸಂಗ್ರಹಾಲಯ ಸ್ಥಾಪಿಸಬೇಕು, ಇದಕ್ಕೆ ಸ್ಥಳೀಯ ವಿಧಾನಸಭಾ, ಸಂಸದರ ವಿದ್ಯಾಭಿಮಾನಿಗಳು ಜತೆಗೂಡಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ವಿಶಿಷ್ಟ ತಾಣಗಳಲ್ಲಿ ಕರ್ನಾಟಕ ಹಸ್ತಪ್ರತಿ ಸಂಗ್ರಹಾಲಯ ಸ್ಥಾಪಿಸುವ ಅವಶ್ಯವಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ವಹಿಸುವುದಲ್ಲದೆ ವಿಶಿಷ್ಟವೂ ಬೋಧಪ್ರದವೂ, ಶೈಕ್ಷಣಿಕ ನೆಲೆ ಒಳಗೊಂಡದ್ದು ಇದಾಗಿರಬೇಕು. ಪ್ರಾಚೀನ ಕಾಲದಿಂದ ಅರ್ವಾಚಿನ ಕಾಲದವರೆಗೂ ಹಸ್ತಪ್ರತಿಗಳು ಸಂಗ್ರಹಗೊಂಡು ಆಯಾಯ ಸ್ಥಳೀಯ ಜ್ಞಾನ ಪರಂಪರೆಯ ವ್ಯಾಪಕತೆ ಸಂರಕ್ಷಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ಆಧುನಿಕ ಕಾಲದ ಶ್ರೇಷ್ಠ ಕವಿಗಳ, ವಿದ್ವಾಂಸರ ಪ್ರಾತಿನಿಧಿಕ ಬರಹಗಳನ್ನು ಈ ಸಂಗ್ರಹಾಲಯ ಒಳಗೊಂಡಿರಬೇಕು, ಆಯಾ ಜಿಲ್ಲೆಗಳ ಸಾಹಿತ್ಯಕ, ಸಾಂಸ್ಕೃತಿಕ ನೆಲೆ,ಬೆಲೆಗಳನ್ನು ತಿಳಿಯಲು ಇದರಿಂದ ಸಾಧ್ಯವಾಗುತ್ತದೆ. ಇಂತಹ ಮಹತ್ವದ ಪ್ರಕಲ್ಪ ಜಾರಿಗೆ ಬರಬೇಕು. ಜತೆಗೆ ರಾಜ್ಯದಲ್ಲಿ ಹಸ್ತಪ್ರತಿ ಅಧ್ಯಯನ ಕೇಂದ್ರ ಸ್ಥಾಪನೆ ಯಾಗಲಿ, ಬಾಗಲಕೋಟೆ ಸಾಂಸ್ಕೃತಿಕ ಜಿಲ್ಲೆಯಾಗಿದ್ದು, ಜಮಖಂಡಿ, ಕೆರೂರ, ಬೀಳಗಿ, ಬದಾಮಿ, ಗುಳೆದಗುಡ್ಡ, ಮುಧೋಳ, ಹಳ್ಳೂರು, ಹುನಗುಂದ, ಕೆಲೂರು, ಅಮೀನಗಡ, ಕಮತಗಿ, ಸಂಗಮ ಮುಂತಾದ ಸ್ಥಳಗಳು ಹಸ್ತಪ್ರತಿ ರಚನೆ, ಪಾಲನೆ, ಫೋಷಣೆಗಳ ನೆಲೆಗಳಾಗಿದ್ದವು. 30ಕ್ಕೂ ಅಧಿಕ ಲಿಪಿಕಾರ, ಹಲವು ಜನ ಪೋಷಕರ ಬಗೆಗೆ ದಾಖಲೆಗಳಿರುವುದು ಬಾಗಲಕೋಟೆ ಜಿಲ್ಲೆಯ ಅರ್ಥವಂತಿಕೆ ಹೆಚ್ಚಿಸಿದೆ ಎಂದರು.