ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿದೆ. ಇದು ಮತದಾರರಪಟ್ಟಿ ಶುದ್ಧೀಕರಣ ಮಾಡುವುದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದೆ. ಇದು ಮತದಾರರಪಟ್ಟಿ ಶುದ್ಧೀಕರಣ ಮಾಡುವುದಾಗಿದೆ. ಆದರೆ, ರಾಹುಲ್ ಗಾಂಧಿ ಸೇರಿದಂತೆ ಅದರ ಗಠಬಂಧನ ಪಕ್ಷಗಳು ಎಸ್‌ಐಆರ್ ಮೂಲಕ ಕಾಂಗ್ರೆಸ್ ಸ್ವಚ್ಛ ಮಾಡುವುದು ಎಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಎಲ್ಎ-2 ಮತಗಟ್ಟೆ ಅಧ್ಯಕ್ಷರು ಹಾಗೂ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಐಆರ್ ಮೊದಲ ಬಾರಿ ಆಗುತ್ತಿಲ್ಲ. 1956ರಿಂದ ಈ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. 2004ರಿಂದ ಮತದಾರರ ಪಟ್ಟಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ‌ಇದರಿಂದ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸಿಗರಿಗೆ ಬಾಂಗ್ಲಾ ನುಸುಳುಕೋರರ ಬಗ್ಗೆ ಸಮಸ್ಯೆ ಆಗುತ್ತಿದೆ. ದೇಶದ ಪ್ರಜೆ ಅಲ್ಲದವರಿಗೆ ಮತದಾನದ ಹಕ್ಕಿಲ್ಲ. ಇವಿಎಂ ತಂದಿದ್ದೆ ರಾಜೀವ ಗಾಂಧಿ. ಲೋಕಸಭೆಗೆ 2029ರಲ್ಲಿ ಹಾಗೂ 2033ರಲ್ಲಿ ಕರ್ನಾಟಕ ವಿಧಾನಸಭೆಗೆ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಆಧಾರ ಮೇಲೆ‌ ಚುನಾವಣೆ ನಡೆಯಲಿದೆ ಎಂದರು.

ಹು-ಧಾ. ಪೂರ್ವ ಕ್ಷೇತ್ರ ಈ ಬಾರಿ ಗೆಲ್ಲಲೇಬೇಕು. ಎಲ್ಲಿ ಕಳೆದುಕೊಂಡಿದ್ದೇವೆ, ಸೋತಿದ್ದೇವೆ ಅಲ್ಲಿಯೇ ನಾವು ಹುಡುಕಬೇಕು. ಯಾರು ಶ್ರಮಪಟ್ಟು ಕಾರ್ಯನಿರ್ವಹಿಸುತ್ತಾರೆ ಅವರೆಲ್ಲ ಪಕ್ಷದ ಕಾರ್ಯಕರ್ತರಾಗಲು ಅರ್ಹರು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ, ಎಸ್ಐಆರ್ ಜಿಲ್ಲಾ ಉಸ್ತುವಾರಿ ಕೇಶವ ಪ್ರಸಾದ್ ಮಾತನಾಡಿದರು. ಈ ವೇಳೆ ಹು-ಧಾ ಮಹಾನಗರ ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ, ಡಾ. ಕ್ರಾಂತಿಕಿರಣ್, ಲಿಂಗರಾಜ ಪಾಟೀಲ, ರಾಧಾಬಾಯಿ ಸಫಾರೆ, ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ರಂಗಾ ಬದ್ದಿ ಇದ್ದರು.