ಹಾನಗಲ್ಲ: ವೋಟ್ ಚೋರಿ ಎಂದು ಬಿಜೆಪಿ ಮೇಲೆ ಹರಿಹಾಯುವ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಸಮ್ಮುಖದಲ್ಲೇ ಕಾಂಗ್ರೆಸಿಗರಿಂದ ವೋಟ್ ಚೋರಿ ರಾಜಾರೋಷವಾಗಿ ನಡೆಯುತ್ತಿರುವುದು ಇಡೀ ದೇಶದಲ್ಲಿ ಕಾಂಗ್ರೆಸ್ ಹೇಳುವುದೇ ಬೇರೆ ಮಾಡುವುದೇ ಬೇರೆ ಎಂಬುದು ಸಾಬೀತಾಗಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ಬಿ. ಪಾಟೀಲ ಕಿಡಿ ಕಾರಿದರು.
ಸೋಮವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ದೇಶದಲ್ಲಿ ಯಾರನ್ನೋ ಕಳ್ಳರು ಎಂದು ದೂಷಿಸಿ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್ ಈಗ ಹಾವೇರಿಯಲ್ಲಿ ನಡೆದ ವೋಟ್ ಚೋರಿ ಬಗ್ಗೆ ಏನು ಹೇಳುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾವೇರಿಗೆ ಬಂದು ವಾಸ್ತವವನ್ನು ನೋಡಿ ಯಾರು ವೋಟ್ ಚೋರಿ ಮಾಡುತ್ತಿದ್ದಾರೆ ಎಂದು ಪ್ರಕಟಿಸಲಿ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಿಗೆ ಅವರ ಧರ್ಮ ಪತ್ನಿ ಮತವನ್ನೇ ವೋಟ್ ಚೋರಿ ಮಾಡಿದ ರಾಜ್ಯ ಸರ್ಕಾರದ ಪ್ರತಿಷ್ಠಿತ ಗ್ಯಾರಂಟಿ ಸಮಿತಿಯ ಸದಸ್ಯೆ ಶಿಲ್ಪಾ ಅವರಿಗೆ ಪ್ರೇರಣೆಯಾದವರು ಯಾರು ಎಂಬ ಪ್ರಶ್ನೆ ಸಮಾಜದ ಮುಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರೊಂದಿಗೆ ಮತ ಹಾಕಲು ಮತಗಟ್ಟೆಗೆ ತೆರಳಿ, ಕಳ್ಳ ಮತ ಹಾಕಿದ್ದು ಇಡೀ ಪದವೀಧರ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ರೇಗಿದರು. ಈ ಮತಗಟ್ಟೆಯ ಚುನಾವಣಾಧಿಕಾರಿಯನ್ನು ಉದ್ಯೋಗದಿಂದ ವಜಾಗೊಳಿಸಬೇಕು. ಈ ಮತಗಟ್ಟೆಯಲ್ಲಿ ಮರು ಮತದಾನ ನಡೆಯಬೇಕು ಎಂದು ಒತ್ತಾಯಿಸಿದರು.ಅ.೨೭ರಿಂದ ಅಹೋರಾತ್ರಿ ಧರಣಿ: ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ರೈತರಿಗೆ ರೈತರಿಗೆ ೨೫ ಸಾವಿರ ರು. ತಾತ್ಕಾಲಿಕ ಪರಿಹಾರ ಕೂಡಲೇ ಬಿಡುಗಡೆಗೊಳಿಸಬೇಕು. ವೃದ್ಧಾಪ್ಯ, ವಿಶೇಷ ಚೇತನ, ವಿಧವಾ ವೇತನಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಗುತ್ತಿಗೆದಾರರ ಬಾಕಿ ಬಟವಡೆಯಾಗಬೇಕು ಎಂದು ಒತ್ತಾಯಿಸಿ, ಅ.೨೬ರ ವರೆಗೆ ತಾಲೂಕು ತಹಶೀಲ್ದಾರರಿಗೆ ಗಡುವು ನೀಡಲಾಗಿತ್ತು. ಈ ಗಡುವಿನಲ್ಲಿ ವೃದ್ಧಾಪ್ಯ ವೇತನ ನೀಡಿಲ್ಲ. ವಿಶೇಷ ಚೇತರಿಗೆ ನೀಡುವ ಹಣವನ್ನೂ ನೀಡಿಲ್ಲ. ವಿಧವಾ ವೇತವನ್ನೂ ನೀಡಿಲ್ಲ, ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಗುತ್ತಿಗೆದಾರರ ಬಾಕಿ ಹಣವೂ ಬಟವಡೆ ಆಗಿಲ್ಲ. ಆ ಕಾರಣಕ್ಕಾಗಿ ಅ.೨೭ರಿಂದ ಬೇಡಿಕೆ ಈಡೇರುವವರೆಗೆ ಹಾನಗಲ್ಲ ತಾಲೂಕು ತಹಸೀಲ್ದಾರ್ ಕಚೇರಿ ಆವಣರದಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೂಕಪ್ಪ ಪಡೆಪ್ಪನವರ, ಮಹಮ್ಮದ್ಸಲಿಂ ಸಮನಳ್ಳಿ, ಯಲ್ಲಪ್ಪ ಸವಣೂರ, ಅಶೋಕ ನೆರಚಿಕಟ್ಟಿ, ಬಸವರಾಜ ಶಿವಣ್ಣನವರ, ನೀಲಪ್ಪ ಬಾರ್ಕಿ, ನಂದೀಶ ಕೌರದ ಇದ್ದರು.