ಮತದಾನ ಒಂದು ಶ್ರೇಷ್ಠವಾದ ಪ್ರಕ್ರಿಯೆಯಾಗಿದ್ದು, ಇದು ನಮಗೆ ಪ್ರಶ್ನಿಸುವ ಹಕ್ಕನ್ನೂ ನೀಡುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿ.ಎ.ಮಂಜುನಾಥ ತಿಳಿಸಿದರು.
ಶಿವಮೊಗ್ಗ: ಮತದಾನ ಒಂದು ಶ್ರೇಷ್ಠವಾದ ಪ್ರಕ್ರಿಯೆಯಾಗಿದ್ದು, ಇದು ನಮಗೆ ಪ್ರಶ್ನಿಸುವ ಹಕ್ಕನ್ನೂ ನೀಡುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿ.ಎ.ಮಂಜುನಾಥ ತಿಳಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಘೂ ಮಹಾ ನಗರಪಾಲಿಕೆ ಇವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ವಿಶಾಲ ಮತ್ತು ಸಂಬತ್ಭರಿತ ದೇಶವಾಗಿದ್ದರೂ ಸ್ವಾತಂತ್ರ್ಯ ಮುನ್ನ ಒಗ್ಗಟ್ಟಿನ ಕೊರತೆ ಕಾರಣ ಉತ್ತಮ ನಾಯಕರನ್ನು ಆರಿಸಲು ಆಗದೇ ನಾಯಕನ ಕೊರತೆ ಕಾಣುತ್ತಿತ್ತು. ಸ್ವಾತಂತ್ರ್ಯ ನಂತರ ಸಂವಿಧಾನ ರಚನೆಯಾದ ಮೇಲೆ ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಆರಂಭಿಸಿದೆವು. ಚುನಾವಣೆ ಎಂಬುದೊಂದು ಶ್ರೇಷ್ಠತಮ ಪ್ರಕ್ರಿಯೆಯಾಗಿದ್ದು, ಎಲ್ಲ ಮತದಾರರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನವು ನಮ್ಮ ನಾಯಕರ ಕುರಿತು ಪ್ರಶ್ನಿಸುವ ಹಕ್ಕನ್ನೂ ನೀಡುವುದರಿಂದ ಇದೊಂದು ಉತ್ಕೃಷ್ಟ ಕೆಲಸವಾಗಿದ್ದು, ಅತ್ಯಂತ ನಿಷ್ಠೆ ಮತ್ತು ನ್ಯಾಯಪರವಾಗಿ ಚುನಾವಣೆಗಳನ್ನು ಮಾಡಬೇಕು. ನಾವೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ನಾವು ರಾಷ್ಟ್ರಕ್ಕಾಗಿ ಮಾಡುವ ಪ್ರಮುಖ ಕೆಲಸ ಮತದಾನವಾಗಿದ್ದು, ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವುದು ಅತಿ ಮುಖ್ಯ ಕೆಲಸವಾಗಿದೆ ಎಂದರು.ಚುನಾವಣಾ ಪ್ರಕಿಯೆ ಬಗ್ಗೆ, ತಾವು ಆರಿಸಲಿರುವ ನಾಯಕರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸೂಕ್ತ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ನಾಗರಿಕರಲ್ಲಿ ಈ ನಿರಾಸಕ್ತಿ ಹೋಗಬೇಕು. ಇದಕ್ಕಾಗಿ ಯುವ ಮತದಾರರು ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ಸಾಮಾನ್ಯವಾದುದ್ದಲ್ಲ. ಚುನಾವಣೆ ಒಂದು ಅತಿ ಮುಖ್ಯ ಕೆಲಸವಾಗಿದ್ದು, ಸಂವಿಧಾನದ ಎಲ್ಲ ಆಶಯಗಳನ್ನು ಜಾರಿಗೆ ತರುವ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಸ್ವೀಪ್ ಚಟುವಟಿಕೆಯಿಂದ ಹಿಡಿದು ಮತಗಳ ಎಣಿಕೆವರೆಗೆ ಅನೇಕ ಕೆಲಸಗಳಿದ್ದು, ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ''''''''ನನ್ನ ಭಾರತ ನಮ್ಮ ಮತ ನಾನು ಭಾರತೀಯ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 17,52,885 ಜನ ನೋಂದಯಿತ ಮತದಾರರ ಪೈಕಿ 13,78,579 ಜನರು ಮಾತ್ರ ಮತ ಚಲಾವಣೆ ಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರದಲ್ಲಿ ಅತಿ ಕಡಿಮೆ (ಶೇ. 68.96 ) ಮತದಾನವಾಗಿದೆ ಎಂದರು.ಮತದಾನದಲ್ಲಿ ಎಲ್ಲ ಮತದಾರರು ಪಾಲ್ಗೊಳ್ಳಬೇಕಿರುವುದು ಅತಿ ಅವಶ್ಯವಾಗಿದ್ದು, 2013ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೋಟಾ(ನನ್ ಆಫ್ ದಿ ಎಬವ್) ಅಂದರೆ ಯಾವುದೇ ಅಭ್ಯರ್ಥಿಗೆ ಮತ ನೀಡಲು ಇಷ್ಟವಿಲ್ಲ ಎಂಬುದನ್ನು ನಮೂದಿಸಲು ಅವಕಾಶವನ್ನು ನೀಡುವ ಮೂಲಕ ನಮ್ಮ ಮೂಲಭೂತ ಹಕ್ಕನ್ನು ಕರ್ತವ್ಯ ಕೂಡ ಆಗಿದೆ ಎಂದು ಆದೇಶಿಸಿದೆ. ಆದ್ದರಿಂದ ಯಾವುದೇ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ನೋಟಾ ಹಾಕುವ ಮೂಲಕವಾದರೂ ಶೇ.100 ಮತದಾನವಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮಾತನಾಡಿದರು. ಇದೇ ವೇಳೆ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.ಅತ್ಯುತ್ತಮ ಬಿಎಲ್‌ಓಗಳು, ಅತ್ಯುತ್ತಮ ಸೂಪರ್‌ವೈಸರ್‌ಗಳನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದಲ್ಲಿ ಅತ್ಯುತ್ತಮ ಮತದಾರರ ನೋಂದಣಾಧಿಕಾರಿ ಪ್ರಶಸ್ತಿ ಪಡೆದ ಪಾಲಿಕೆಯ ಆಯುಕ್ತ ಕೆ.ಮಾಯಣ್ಣ ಗೌಡರನ್ನು ಅಭಿನಂದಿಸಲಾಯಿತು.ಶಿವಮೊಗ್ಗ ಉಪ ವಿಭಾಗಾಧಿಕಾರಿ ಬಿ.ಎಚ್.ಸತ್ಯನಾರಾಯಣ, ಸಾಗರ ಉಪ ವಿಭಾಗದ ಉಪ ವಿಭಾಗಾಧಿಕಾರಿ ವೀರೇಶಕುಮಾರ್, ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್, ತಹಸೀಲ್ದಾರ್ (ಚುನಾವಣೆ) ಎಚ್.ಎಸ್.ಶೋಭಾಲಕ್ಷ್ಮಿ, ಪಾಲಿಕೆ ಕಾರ್ಯಪಾಲಕ ಅಭಿಯಂತರರು ಪಿ.ಪ್ರಿಯಾ, ಜಿಪಂ ಸಿಪಿಒ ಹನುಮಾನಾಯಕ್ ಮತ್ತು ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.