ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದಲ್ಲಿ ಸಂತ ಕನಕದಾಸರ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಭೂಮಿಪೂಜೆ ಕಾರ್ಯವನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಸ್ತ ಮಾನವಜಾತಿ ಒಂದೇ, ಯಾರಲ್ಲೂ ಬೇದಭಾವ ಇರಬಾರದು ಎಂದು ಭಕ್ತ ಕನಕದಾಸರು ಜನಮಾನಸಕ್ಕೆ ನೀಡಿದ ಈ ಸಂದೇಶ ಇಂದಿಗೂ ಪ್ರಸ್ತುತ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.

ತಾಲೂಕಿನ ನೇರಲಗುಂಟೆಗ್ರಾಮದಲ್ಲಿ ಸಂತ ಕನಕದಾಸರ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಭೂಮಿಪೂಜೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು. ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕನಕದಾಸ ವಿಚಾರಧಾರೆಗಳಿಗೆ ಮತ್ತಷ್ಟು ಗೌರವ ನೀಡಿದಂತಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೊಸದುರ್ಗ ಶಾಖಾಮಠದ ಈಶ್ವರನಂದಾಪುರಿ ಸ್ವಾಮೀಜಿ ಮಾತನಾಡಿ, ಕನಕದಾಸರ ವಿಚಾರ ಧಾರೆಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಸಮಾಜದ ಎಲ್ಲಾ ವರ್ಗಗಳನ್ನು ಒಂದೆಡೆ ತರುವ ಅವರಪ್ರಾಮಾಣಿಕ ಪ್ರಯತ್ನಕ್ಕೆ ನಿರೀಕ್ಷಿತಮಟ್ಟದಲ್ಲಿ ಇನ್ನೂ ಫಲಸಿಕ್ಕಿಲ್ಲ. ಕನಕದಾಸರ ಕೀರ್ತನೆಗಳಲ್ಲಿ ಬದುಕಿನ ಮೌಲ್ಯ ಅಡಗಿದೆ. ಅವರ ಆದರ್ಶಗಳ ಪರಿಪಾಲನೆ ನಮ್ಮೆಲ್ಲರ ಆದ್ಯಕರ್ತವ್ಯವೆಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ನಗರಸಭಾ ಮಾಜಿ ಸದಸ್ಯ ಎಂ.ಜೆ.ರಾಘವೇಂದ್ರ, ವಿದ್ಯಾವರ್ಧಕ ಸಂಘದ ತಾಲೂಕು ಅಧ್ಯಕ್ಷ ಪ್ರೊ.ಸಿ.ಶಿವಲಿಂಗಪ್ಪ, ಸಹಕಾರ ರತ್ನ ಪ್ರಶಸ್ತಿ ವಿಜೇತ ಆರ್.ಮಲ್ಲೇಶಪ್ಪ, ಕಂದಿಕೆರೆ ಸುರೇಶ್‌ ಬಾಬು, ಗ್ರಾಪಂ ಅಧ್ಯಕ್ಷ ರುದ್ರಮುನಿ, ಮೊಳಕಾಲ್ಮೂರು ಅಧ್ಯಕ್ಷ ಜಗದೀಶ್, ಪ್ರಕಾಶ್‌ ಒಡೆಯರ್, ತಿಪ್ಪೇಸ್ವಾಮಿರೆಡ್ಡಿ, ಚಂದ್ರಣ್ಣ, ಸೂರನಾಯಕ, ಜಿ.ಆರ್.ಅಶ್ವತ್ಥನಾಯಕ, ಚನ್ನಪ್ಪ, ದರ್ಶನ್, ಮಾರುತಿ, ಮಧುಕಾಲಡಿ, ರಾಜು, ನಾಗರಾಜು, ತಿಪ್ಪೇಶ್, ಪರಸಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.