ಹಣಕಾಸು ವಂಚನೆ ಎಸಗಿರುವ ಸಮೃದ್ಧ ಜೀವನ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯೆದುರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾರವಾರ: ಹಣಕಾಸು ವಂಚನೆ ಎಸಗಿರುವ ಸಮೃದ್ಧ ಜೀವನ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯೆದುರು ಶುಕ್ರವಾರ ಕರ್ನಾಟಕ ಜನಸಂಘರ್ಷ ಫೌಂಡೇಶನ್, ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ (ಎಸ್‌ಸಿ/ಎಸ್‌ಟಿ), ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಭಾರತದಾದ್ಯಂತ 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮೃದ್ಧ ಜೀವನ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಪುಣೆಯ ಸಮೃದ್ಧ ಜೀವನ ಅಗ್ರೋ ಪ್ರಾಪರ್ಟಿ ಕಂಪನಿ ಮೂಲಕ ಕರ್ನಾಟಕ ರಾಜ್ಯದ ಗ್ರಾಹಕರು ಹಾಗೂ ಠೇವಣಿದಾರರಿಂದ ಭಾರೀ ಹಣಕಾಸು ವಂಚನೆ ನಡೆದಿದ್ದು, ಸುಮಾರು 14 ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಸೇರಿದ ಹಣವನ್ನು ತಕ್ಷಣ ಮರುಪಾವತಿ ಮಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ಸಂಸ್ಥೆಯ 54 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 2015ರ ಡಿಸೆಂಬರ್‌ನಲ್ಲಿ ಸಂಸ್ಥೆಯನ್ನು ಬಂದ್ ಮಾಡುವ ಮೂಲಕ ಆರ್‌ಡಿ, ಎಫ್‌ಡಿ, ಎಸ್‌ಐಪಿ, ಪಿಗ್ಮಿ ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ರಾಜ್ಯದಿಂದ ಒಟ್ಟು ₹1600 ಕೋಟಿಗೂ ಅಧಿಕ ಹಣ ವಂಚಿಸಲಾಗಿದೆ. ಸಂಸ್ಥೆಯ ಸಂಸ್ಥಾಪಕ ಚೇರ್‌ಮನ್ ಮಹೇಶ ಕಿಸಾನ್ ಮೋತೇವಾರ್ ಸೇರಿದಂತೆ ಹಲವು ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸಂಚು ರೂಪಿಸಿ ಠೇವಣಿದಾರರ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂಘಟನೆಗಳು ಆರೋಪಿಸಿದ್ದು, ಈ ಕುರಿತು ಕೆಪಿಐಡಿ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಆಗ್ರಹಿಸಿವೆ.ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮೃದ್ಧ ಜೀವನ ಸಂಸ್ಥೆಗೆ ಸೇರಿದ ಆಸ್ತಿಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಆ ವರದಿಯ ಆಧಾರದಲ್ಲಿ ದಿನಾಂಕ 2025 ಮೇ 19ರಂದು ದಿನಪತ್ರಿಕೆಯಲ್ಲಿ ಪ್ರಕಟಣೆ ಹೊರಬಿದ್ದಿದ್ದರೂ, ಈ ವರೆಗೆ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಬಡ ಕೂಲಿ ಕಾರ್ಮಿಕರು, ಸಾಮಾನ್ಯ ಗ್ರಾಹಕರು, ನಿವೃತ್ತ ಸರ್ಕಾರಿ ನೌಕರರು ತಮ್ಮ ಭವಿಷ್ಯದ ಭರವಸೆಯಾಗಿ ಈ ಸಂಸ್ಥೆಯಲ್ಲಿ ಹಣ ಠೇವಣಿ ಇಟ್ಟಿದ್ದು, ಇದೀಗ ಸಂಪೂರ್ಣ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ, ಮಹಾರಾಷ್ಟ್ರ ಸರ್ಕಾರ ಹಾಗೂ ಸಂಬಂಧಿಸಿದ ನ್ಯಾಯಾಲಯಗಳು ತಕ್ಷಣ ಮಧ್ಯಪ್ರವೇಶಿಸಿ, ಎಲ್ಲ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನೊಂದ ಸದಸ್ಯರಿಗೆ ನ್ಯಾಯ ಒದಗಿಸಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.ಈ ಹೋರಾಟಕ್ಕೆ ಸಂಬಂಧಿಸಿದಂತೆ ಕಾರವಾರದ ಜಿಲ್ಲಾಧಿಕಾರಿ ಸರ್ಕಾರದ ಮಾಹಿತಿಯೊಂದಿಗಿನ ಅಧಿಕೃತ ಪ್ರತಿಯನ್ನು ಸಂಘಟನೆಗೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಸರ್ಕಾರ ಈ ವಿಷಯವನ್ನು ವಿಳಂಬ ಮಾಡಿದರೆ, ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರು ಸೇರಿ ರಾಜ್ಯಪಾಲರಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸುತ್ತೇವೆ. ಕಾರವಾರದ ಠಾಗೋರ್ ಕಡಲ ತೀರದಲ್ಲಿ ಅಂತಿಮ ಹೋರಾಟ ನಡೆಸಿ ಕೊನೆಯುಸಿರು ಎಳೆಯುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ನಿಂಗಪ್ಪ, ರಾಜ್ಯ ಅಧ್ಯಕ್ಷ ಎಸ್.ಪಿ. ಬಳ್ಳಾರಿ, ರಾಷ್ಟ್ರ ಸಮಿತಿ ಅಧ್ಯಕ್ಷ ಶಾಹುರಾಜ್ ಮಾನೆ ಹಾಗೂ ಜಿಲ್ಲಾಧ್ಯಕ್ಷ ಪ್ರವೀಣಕುಮಾರ್ ಆರ್. ಶೆಟ್ಟಿ ಸೇರಿದಂತೆ ವಂಚನೆಗೊಳಗಾದ ಹಲವರು ಇದ್ದರು.